ಕೊಟ್ಟೂರು ಪಾದಯಾತ್ರಿಗಳ ಅನುಕೂಲಕ್ಕೆ ರಸ್ತೆ ದುರಸ್ತಿ ಅವಶ್ಯ

ದಾವಣಗೆರೆ, ಫೆ.23-  ಐತಿಹಾಸಿಕ ಕೊಟ್ಟೂರು ಶ್ರೀ ಗುರು ಬಸವೇಶ್ವರರ ರಥೋತ್ಸವಕ್ಕೆ ದಾವಣಗೆರೆಯಿಂದ ಸಾವಿರಾರು ಸಂಖ್ಯೆಯ  ಭಕ್ತರು ಪ್ರತಿವರ್ಷ ಪಾದಯಾತ್ರೆಯ ಮೂಲಕ ತೆರಳಿ  ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ. ಚಳಿ, ಗಾಳಿ, ಬಿಸಿಲು, ಚಿಕ್ಕ ಮಕ್ಕಳು, ದೊಡ್ಡವರು, ವಯೋವೃದ್ಧರೂ ಸೇರಿದಂತೆ ಎಲ್ಲಾ ವರ್ಗದವರು ಪಾದಯಾತ್ರೆಗೆ ಆಗಮಿಸುತ್ತಾರೆ. 

ದಾವಣಗೆರೆಯಿಂದ ಕಂಚಿಕೆರೆಯ ಮೂಲಕ  ತೌಡೂರುವರೆಗಿನ ರಸ್ತೆಯು ಉತ್ತಮವಾಗಿದ್ದು, ಅಲ್ಲಿಯವರೆಗೂ ನಡೆದಿದ್ದೇ ಗೊತ್ತಾಗುವುದಿಲ್ಲ. ಆದರೆ ತೌಡೂರಿನಿಂದ ಅರಸೀಕೆರೆಯವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಬರೀ ದೊಡ್ಡ ಜಲ್ಲಿ ಕಲ್ಲುಗಳಿಂದಲೇ ತುಂಬಿದೆ. ಈ ಮಧ್ಯೆ  ಪಾದಯಾತ್ರಿಗಳು  ಹೈರಾಣಾಗಿದ್ದಂತೂ ನಿಜ.

ವಯೋವೃದ್ಧರು, ಚಿಕ್ಕ ಮಕ್ಕಳು ಸೇರಿದಂತೆ, ಅನೇಕರು ಜಲ್ಲಿಕಲ್ಲಿನ ಮೇಲೆಯೇ ಬಹಳ ಕಷ್ಟಪಟ್ಟು ನಡೆದರೆ, ಇನ್ನೂ ಕೆಲವರು ನರಗನಹಳ್ಳಿಯ  ಮಾರ್ಗದ ಮೂಲಕ ಎರಡು ಕಿಲೋಮೀಟರ್ ಹೆಚ್ಚಿಗೆ ನಡೆದು ಹೇಗೋ ಹರಸಾಹಸ ಪಟ್ಟು  ಅರಸೀಕೆರೆ ತಲುಪಿದರು.

ತೌಡೂರಿನಿಂದ ಅರಸೀಕೆರೆ ಮುಟ್ಟಿದ್ದು ನಿಜಕ್ಕೂ ಅಕ್ಷರಶಃ ನರಕ ಎನ್ನಿಸಿದ್ದು, ಸಾವಿರಾರು ಸಂಖ್ಯೆಯ  ಪಾದಯಾತ್ರಿಗಳು ಪ್ರತಿವರ್ಷ ಇದೇ ಮಾರ್ಗದಲ್ಲಿ ಕೊಟ್ಟೂರಿಗೆ ಹೋಗುತ್ತಾರೆ ಎಂದು ಗೊತ್ತಿದ್ದರೂ ಕೂಡ ರಸ್ತೆಯನ್ನು ಸಕಾಲದಲ್ಲಿ ಸರಿಪಡಿಸದೇ ಇದ್ದದ್ದು, ಪಾದಯಾತ್ರಿಕರು ಮಾತ್ರ  ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಾ, ಪಾದಯಾತ್ರೆ ಮಾಡಿದ್ದು, ಎಲ್ಲೆಡೆಯೂ ಕಂಡುಬಂದಿತು. ಸರ್ಕಾರ ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಸಕಾಲದಲ್ಲಿ ಕೆಲಸ ಮುಗಿಸಿ ಪಾದಯಾತ್ರಿಗಳಿಗೆ ನೆರವಾಗಬೇಕಿದೆ.

error: Content is protected !!