ಸಾಮಾಜಿಕ ನ್ಯಾಯ ಎತ್ತಿಹಿಡಿಯುವುದು ಎಲ್ಲರ ಆದ್ಯ ಕರ್ತವ್ಯ

`ವಿಶ್ವ ಸಾಮಾಜಿಕ ನ್ಯಾಯದಿನ’ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್

ದಾವಣಗೆರೆ, ಫೆ.23- ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಹೇಳಿದರು.

ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಶ್ರೀಮತಿ ಪಾರ್ವತಮ್ಮ ಶಾಮ ನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಸಂಯುಕ್ತವಾಗಿ ನಿನ್ನೆ ಏರ್ಪಡಿಸಿದ್ದ `ವಿಶ್ವ ಸಾಮಾಜಿಕ ನ್ಯಾಯದಿನ’ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

`ಔಪಚಾರಿಕ ಉದ್ಯೋಗದ ಮೂಲಕ ಸಾಮಾಜಿಕ ನ್ಯಾಯ ಸಾಧಿಸುವುದು’ ಸಾಮಾಜಿಕ ನ್ಯಾಯ ದಿನದ ಪ್ರಸಕ್ತ ವರ್ಷದ ಧ್ಯೇಯ ವಾಕ್ಯವಾಗಿದೆ ಎಂದರು.

ಬಡತನ ನಿರ್ಮೂಲನೆ, ಮೂಲಭೂತ ಹಕ್ಕುಗಳಿಂದ ವಂಚಿತರಾದ ವರ್ಗಗಳನ್ನು ರಕ್ಷಣೆ ಮಾಡುವುದು, ಲಿಂಗಭೇದ ತಡೆಯುವುದು, ನಿರುದ್ಯೋಗ ನಿರ್ಮೂ ಲನೆ, ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವುದು ಸೇರಿದಂತೆ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕಲು ಸಾಮಾಜಿಕ ನ್ಯಾಯದಿನದಿಂದ ಸಾಧ್ಯವಾಗು ತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

`ಔಪಚಾರಿಕ ಉದ್ಯೋಗದ ಮೂಲಕ ಸಾಮಾ ಜಿಕ ನ್ಯಾಯವನ್ನು ಸಾಧಿಸುವುದು’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ವಕೀಲರಾದ ಎಲ್.ಹೆಚ್. ಅರುಣ್ ಕುಮಾರ್ ಅವರು, ಖಾಸಗೀಕರಣ ಸಾಮಾಜಿಕ ನ್ಯಾಯದ ಬಹುದೊಡ್ಡ ವಿಪರ್ಯಾಸವಾಗಿದೆ. ಖಾಸಗೀಕರಣವೇ ಸಾಮಾಜಿಕ ಅನ್ಯಾಯ ಎಂದು ಪ್ರತಿಪಾದಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸುವ ಪ್ರಭುತ್ವಕ್ಕೆ ಬದ್ಧತೆ ಇಲ್ಲದ ಕಾರಣ ಜಾತೀಯತೆ ನಿರ್ಮೂಲನೆ ಬದಲು ಜಾತಿಗಳ ಧ್ರುವೀಕರಣವಾಗುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದರು.

ಸಂವಿಧಾನದಡಿಯಲ್ಲಿ ಭ್ರಷ್ಟಾಚಾರ ರಹಿತ, ಜಾತ್ಯತೀತ ಸಮಾಜ ನಿರ್ಮಾಣದ ಕಡೆ ಹೆಜ್ಜೆ ಹಾಕಬೇಕಾಗಿದೆ.ಎಲ್ಲರಿಗೂ ಸಮಾನ ಅವಕಾಶಗಳು ಸಿಗುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳಿರಬೇಕು ಎಂದು ಸಲಹೆ ನೀಡಿದರು.

ಖಾಸಗೀರಕಣ, ಭ್ರಷ್ಟಾಚಾರ, ಜಾತೀಯತೆಗಳ ಕಬಂಧ ಬಾಹುಗಳಿಂದ ಸಾಮಾಜಿಕ ನ್ಯಾಯ ನರಳುವಂತಾಗಿದೆ. ಪ್ರಜೆಗಳು ಸಾಮಾಜಿಕ ನ್ಯಾಯದಿಂದ ವಂಚಿತರಾಗುವುದನ್ನು ತಡೆಗಟ್ಟುವ ಅವಶ್ಯವಿದೆ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜ್ ಮಾತನಾಡಿ, ನಿರುದ್ಯೋಗಿ ಎಂಬ ಮಾನಸಿಕ ಸ್ಥಿತಿಯಿಂದ ಹೊರಬರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುವ ಸಾಮಾಜಿಕ ಭದ್ರತೆ ಬೇಕಾಗಿದೆ. ಬದ್ಧತೆ ಇದ್ದರೆ ಭದ್ರತೆ ತಾನಾಗಿಯೇ ಬರುತ್ತದೆ. ತನ್ಮೂಲಕ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಬಿ.ಪಿ. ಕುಮಾರ್ ಮಾತನಾಡಿ ಶಿಕ್ಷಣ, ಆರೋಗ್ಯ, ಸಾಮಾ ಜಿಕ ಕ್ಷೇತ್ರಗಳಲ್ಲಿ ಜನರಿಗೆ ಸಾಮಾಜಿಕ ನ್ಯಾಯ ಎಷ್ಟ ರಮಟ್ಟಿಗೆ ಸಿಗುತ್ತದೆ ಎಂಬುದರ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಾಗಿದೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದರು.

ಸಹನಾ ಮತ್ತು ಅಂಜನಾ ಪ್ರಾರ್ಥಿಸಿದರು. ಪ್ರೊ. ಆರ್. ಆರ್. ಶಿವಕುಮಾರ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅಮೂಲ್ಯ ನಿರೂಪಿಸಿದರು. ಪ್ರೊ. ಪಾಲಾಕ್ಷ ವಂದಿಸಿದರು. ನ್ಯಾಕ್ ಸಂಯೋಜಕರಾದ ಪ್ರೊ.ಜಿ.ಸಿ. ನೀಲಾಂಬಿಕೆ, ಕನ್ನಡ ವಿಭಾಗದ ಮುಖ್ಯಸ್ಥ ಡಾ ರಣಧೀರ ಉಪಸ್ಥಿತರಿದ್ದರು.

error: Content is protected !!