ನಂದಿತಾವರೆ ಶಾಲೆಯಲ್ಲಿ ಗಣಕಯಂತ್ರ, ನೋಟ್‍ಬುಕ್ ವಿತರಣಾ ಸಮಾರಂಭದಲ್ಲಿ ಶರಣ್ ಹೆಗಡೆ
ಮಲೇಬೆನ್ನೂರು, ಫೆ.22- ಮನೆಯಲ್ಲಿನ ಟಿವಿ, ಕೈಯ್ಯಲ್ಲಿರುವ ಮೊಬೈಲ್‍ಗಳು ಭವಿಷ್ಯ ರೂಪಿಸುವುದಿಲ್ಲ ಎಂದು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣ್ ಹೆಗಡೆ ಅಭಿಪ್ರಾಯಪಟ್ಟರು.
ಸಮೀಪದ ನಂದಿತಾವರೆ ಬಸವೇಶ್ವರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಬೆಂಗಳೂರಿನ ಅನಿತಾ ಗುರು ನೀಡಲಾದ ಗಣಕಯಂತ್ರ ಮತ್ತು ನೋಟ್‍ಬುಕ್‍ಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ಅಂತಹ ವಸ್ತುಗಳಿಂದ ದೂರವಿದ್ದು ಪುಸ್ತಕದ ಗೆಳೆಯನಾದರೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಜೀವನ ಭದ್ರಪಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ರಾಜ್ಯ ನವ ನಿರ್ಮಾಣ ಸೇನೆಯ ಕಾರ್ಯ ದರ್ಶಿ ಎಚ್.ಬಿ.ರುದ್ರಗೌಡ ಮಾತನಾಡಿ, ಶಿಸ್ತು ಇದ್ದಲ್ಲಿ ಗ್ರಾಮೀಣ ಮಕ್ಕಳು ಮಿಂಚುವುದು ಕಷ್ಟವೇನಲ್ಲ, ನೋಟ್ ಬುಕ್ ನೀಡಲು ಸಂಘ, ಸಂಸ್ಥೆಗಳ ಮನವೊಲಿಸಿ ಹಲವು ಶಾಲೆಗಳ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಕ ಶರಣ್ ಹೆಗಡೆ ಪ್ರೇರಕ ಶಕ್ತಿಯಾಗಿರುವುದು ತಾಲ್ಲೂಕಿನ ಪುಣ್ಯವಾಗಿದೆ ಎಂದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ, ಭವ್ಯ ಭಾರತದ ಪ್ರಜೆಗಳಾಗಲು ವಿದ್ಯಾಭ್ಯಾಸದಲ್ಲಿ ವೇಳಾ ಪಟ್ಟಿ ಹಾಕಿ ಅಭ್ಯಾಸ ಮಾಡಬೇಕು. ಅಸಾಧ್ಯ ಯಾವುದೂ ಇಲ್ಲ. ಸಾಧನೆಗೆ
ಗುರಿ ಮುಖ್ಯವಾಗಿದೆ. ಆ ಹಂತದಲ್ಲಿ
ನಡೆದಲ್ಲಿ ಅಂದುಕೊಂಡದ್ದನ್ನು ಮಾಡುತ್ತೀರಿ ಎಂದು ಹೇಳಿದರು.
ಕುಣೆಬೆಳಕೆರೆ ವೃತ್ತದ ಗ್ರಾಲೆ ದೇವರಾಜ್ ಮಾತನಾಡಿ, ಸೇವಾವಧಿಯಲ್ಲಿರುವತನಕ ಪ್ರತಿ ವರ್ಷವೂ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಧನಸಹಾಯ ನೀಡುವುದಾಗಿ ಪ್ರಕಟಿಸಿದರು.
ಮುಖ್ಯ ಶಿಕ್ಷಕ ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ ಸದಸ್ಯ ಸಂತೋಷ್, ಯುವಜನ ಪ್ರಶಸ್ತಿ ಪುರಸ್ಕೃತ ಸದಾನಂದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಬಸವನ ಗೌಡ, ದರ್ಶನ್, ಅನುಷಾ, ವೈಷ್ಣವಿ, ತರುಣ್, ಅಶ್ವಿನಿ, ಶಿಕ್ಷಕರಾದ ನಾಗರಾಜ್, ಸುರೇಶ್ ಮತ್ತಿತರರು ತಮ್ಮ ಅನಿಸಿಕೆ ಹಂಚಿಕೊಂಡರು.