ಬಾಪೂಜಿ ಎಂ. ಬಿ. ಎ. ಸಂಸ್ಥಾಪನಾ ದಿನಾಚರಣೆಯಲ್ಲಿ ಅಜಯ್ ಕುಮಾರ್ ಗುಪ್ತ
ದಾವಣಗೆರೆ, ಫೆ. 22- ತಂತ್ರಜ್ಞಾನವಾಗಲೀ, ವಾಣಿಜ್ಯ ಜ್ಞಾನವಾಗಲೀ, ನಿರ್ವಹಣಾ ಜ್ಞಾನ ವಾಗಲೀ ತಿಳುವಳಿಕೆ ಇದ್ದರೆ ಸಾಲದು, ಅಳವಡಿಕೆಯ ಕೌಶಲ್ಯವೂ ಅವಶ್ಯ ಎಂದು ಗ್ರಾಸಿಮ್ ಕೈಗಾರಿಕೆಯ ವಿಭಾಗದ ಮುಖ್ಯಸ್ಥ, ಹಿರಿಯ ಅಧ್ಯಕ್ಷ ಅಜಯ್ ಕುಮಾರ್ ಗುಪ್ತ ಹೇಳಿದರು.
ಬಾಪೂಜಿ ಮ್ಯಾನೇಜ್ಮೆಂಟ್ ಕಾಲೇಜಿನ 25 ನೇ ಸಂಸ್ಥಾಪನಾ ದಿನ ಹಾಗೂ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಯಶಸ್ಸಿನ ಗಾಥೆ ಆಗಬೇಕೆಂದರೆ ಮೊದಲು ವೈಯಕ್ತಿಕ ಛಾಪು ಮೂಡಿಸಬೇಕು. ನಂತರ ಸಂಸ್ಥೆಯ ಛಾಪು ಮೂಡಿಸಬೇಕು, ಅದಕ್ಕೂ ಪೂರ್ವವಾಗಿ ಏನು ಸಾಧಿಸಬೇಕೆಂಬುದುರ ಸ್ಪಷ್ಟ ಅರಿವು ಬೇಕು. ನಂತರ ಅದಕ್ಕೆ ಪೂರಕವಾಗಿ ಏನು ಮಾಡಬೇಕೆಂಬುದರ ಅರಿವನ್ನು ಸಹವರ್ತಿಗಳಿಗೆ ಕೊಡಬೇಕು ಎಂದು ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ಮತ್ತೋರ್ವ ಮುಖ್ಯ ಅತಿಥಿ, ಹರಿಹರದ ಸಿಂಥೆಟಿಕ್ ಇಂಡಸ್ಟ್ರೀಸ್ ನ ಜನರಲ್ ಮ್ಯಾನೇಜರ್ ಎಲ್.ಕೆ. ನಾಗರಾಜ್ ಮಾತನಾಡಿ, ಸಂವಹನ ಕೌಶಲ್ಯ, ಮಾನವ ಸಂಪನ್ಮೂಲ ಬಳಕೆ, ನಾಯಕತ್ವ ಗುಣ ಅತ್ಯವಶ್ಯ. ಅಂಕ ಗಳಿಕೆಗೆ ಕೊಡುವಷ್ಟೇ ಗಮನವನ್ನು ಕೈಗಾರಿಕಾ ಕೌಶಲ್ಯಕ್ಕೂ ಕೊಡಬೇಕು. ಅದರಲ್ಲೂ ಬಹುಮುಖ, ಬಹುವಿಧ ಕೌಶಲ್ಯಗಳು ಬೇಕು ಎಂದರು.
ಉದ್ಘಾಟನಾ ನುಡಿಗಳನ್ನಾಡಿದ ಬಾಪೂಜಿ ತಾಂತ್ರಿಕ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್. ಬಿ. ಅರವಿಂದ್, ಆಲೋಚನೆಗಳು ಸ್ಥಳೀಯ ಸಮಸ್ಯೆಗಳ ಮಿತಿಯಲ್ಲಿ ದ್ದರೂ ಕಾರ್ಯಾನುಷ್ಠಾನ ಜಾಗತಿಕ ಸಮಸ್ಯೆಗಳ ನಿವಾರಣಾ ಮಟ್ಟದ್ದಾಗಿರಬೇಕು, ನೂತನ ಶಿಕ್ಷಣ ನೀತಿಯಲ್ಲಿ ಕಲಿಕೆಯು ಪರೀಕ್ಷೆ ಬರೆಯುವುದಕ್ಕಷ್ಟೇ ಅಲ್ಲ, ಜ್ಞಾನ ಸಂಪಾದನೆಗೆ ಎಂದರು.
ಕಾಲೇಜಿನ ಚೇರ್ಮನ್ ಅಥಣಿ ಎಸ್. ವೀರಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬದಲಾಗುತ್ತಿರುವ ತಂತ್ರಜ್ಞಾನದ ಸವಾಲು ಎದುರಿಸಿ ಸಾಧನೆ ಮಾಡಲು ನಿತ್ಯ ಕಲಿಕೆ ಅವಶ್ಯ, ಪ್ರಸ್ತುತ ಔದ್ಯಮಿಕ ರಂಗವು ಗ್ರಾಹಕ ಪ್ರಧಾನವಾಗಿದ್ದು ಗ್ರಾಹಕರ ಅಭಿರುಚಿಯ, ಅಭಿವೃದ್ಧಿಯ ಅರಿವು ಅವಶ್ಯ ಎಂದರು.
ಪ್ರಾಧ್ಯಾಪಕ ವರ್ಗದ ನವೀನ್ ನಾಗರಾಜ್, ಸುಜಿತ್, ಪ್ರಕಾಶ್, ಡಾ. ಬಿ. ವೀರಪ್ಪ ಉಪಸ್ಥಿತರಿದ್ದರು.
ಕಾಲೇಜಿನ ನಿರ್ದೇಶಕ ಸ್ವಾಮಿ ತ್ರಿಭುವನಾನಂದ ಸ್ವಾಗತಿಸಿದರು. ನಂದಿನಿ ಪ್ರಾರ್ಥಿಸಿದರು. ಸುಹೇಲ್, ಕಿಶನ್ ನಿರೂಪಿಸಿದರು. ಶೃತಿ ವಂದಿಸಿದರು.