ಮಲೇಬೆನ್ನೂರು, ಫೆ.22- ಹಿಜಾಬ್ ತೆರವು ಮಾಡುವುದಿಲ್ಲ ಎಂದು ಹಠ ಹಿಡಿದ 12 ವಿದ್ಯಾರ್ಥಿನಿಯರಿಗೆ ಮಂಗಳವಾರವೂ ತರಗತಿಗೆ ಪ್ರವೇಶವನ್ನು ನಿರಾಕರಿಸಿದ ಘಟನೆ ಮಲೇಬೆನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಪ್ರಥಮ ಪಿಯುಸಿಯ 12 ವಿದ್ಯಾರ್ಥಿನಿಯರು ನಾವು ಹಿಜಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಾಗ ಕಾಲೇಜಿನ ಪ್ರಾಚಾರ್ಯ ರಂಗಪ್ಪ ಅವರು ಹಿಜಾಬ್ ತೆರವು ಮಾಡದ ಹೊರತು ತರಗತಿಗೆ ಪ್ರವೇಶ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಕಾಲೇಜಿನ ಪ್ರಾಚಾರ್ಯ ರಂಗಪ್ಪ, ಪಿಎಸ್ಐ ರವಿಕುಮಾರ್ ಮತ್ತು ಉಪನ್ಯಾಸಕರು ಪ್ರತಿದಿನ ಹೀಗೆ ಹಠ ಮಾಡಬೇಡಿ, ಪರಿಸ್ಥಿತಿಗೆ ಹೊಂದಿಕೊಂಡು ಸರ್ಕಾರದ ಆದೇಶವನ್ನು ಪಾಲಿಸಿ ಎಂದು ಎಷ್ಟೇ ಮನವರಿಕೆ ಮಾಡಿದರೂ ವಿದ್ಯಾರ್ಥಿನಿಯರು ಮಾತ್ರ ಮನಸ್ಸು ಬದಲಿಸಲಿಲ್ಲ.
ಕಾಲೇಜು ಸಮಯ ಮುಗಿಯುವವರೆಗೂ ಗೇಟ್‌ನಿಂದ ಹೊರಗಡೆ ಇದ್ದ ವಿದ್ಯಾರ್ಥಿನಿಯರು, ನಂತರ ಮನೆಗೆ ತೆರಳಿದರು. ವಿಶೇಷ ಎಂದರೆ ಸೋಮವಾರ ವಿದ್ಯಾರ್ಥಿನಿಯರನ್ನು ಬೆಂಬಲಿಸಿ ತರಗತಿ ಬಹಿಷ್ಕರಿಸಿದ್ದ ವಿದ್ಯಾರ್ಥಿಗಳು ಇವತ್ತು ತರಗತಿಗೆ ತೆರಳಿದ್ದರು.