ಚನ್ನಗಿರಿಯಲ್ಲಿ ವಾಲ್ಮೀಕಿ ನಾಯಕ ಸಮಾಜದಿಂದ ಪ್ರತಿಭಟನೆ
ಚನ್ನಗಿರಿ, ಫೆ.22- ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿಯನ್ನು ಹೆಚ್ಚಿಸಬೇಕೆಂದು ಆಗ್ರಹಿಸಿ, ವಾಲ್ಮೀಕಿ ನಾಯಕ ಸಮಾಜದಿಂದ ಚನ್ನಗಿರಿಯಲ್ಲಿ ನಿನ್ನೆ ಬೃಹತ್ ಪ್ರತಿಭಟನೆಯನ್ನು ನಡೆಸಿ ತಹಶೀಲ್ದಾರ್ರಿಗೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ವಾಲ್ಮೀಕಿ ಭವನದಿಂದ ಆರಂಭಿಸಿ, ಪಟ್ಟಣದ ಪ್ರಮುಖ ರಸ್ತೆಗಳ ಮುಖಾಂತರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಾಯಕ ಸಮಾಜ ಬಾಂಧವರು ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡ ಬೇಕೆಂದು ಆಗ್ರಹಿಸಿದರು.
ವಾಲ್ಮೀಕಿ ಗುರುಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನಾನಂದ ಸ್ವಾಮಿ ಯವರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸಹ ಸರ್ಕಾರ ನಿರ್ಲಕ್ಷ್ಯತನ ತೋರುತ್ತಿರುವುದನ್ನು ತೀವ್ರ ವಾಗಿ ಖಂಡಿಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.
ಕೇಂದ್ರ ಸರ್ಕಾರದ ಮಾದರಿಯಲ್ಲಿ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಪ್ರಸ್ತುತ ಜಾತಿ ಜನಸಂಖ್ಯೆಗೆ ಅನುಗುಣ ವಾಗಿ ಪರಿಶಿಷ್ಟ ಜಾತಿಯವರಿಗೆ ಶೇ.18 ಪರಿಶಿಷ್ಟ ಪಂಗಡದವರಿಗೆ ಶೇ.9 ರಷ್ಟು ಮೀಸಲಾತಿಯನ್ನು ನೀಡಿ, ಸಾಮಾಜಿಕ ನ್ಯಾಯವನ್ನು ಒದಗಿಸಬೇಕೆಂದು ಆಗ್ರಹ ಪಡಿಸಿದರು.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ನಾಯಕ ಸಮಾಜ ಅಧ್ಯಕ್ಷ ಬಿ.ವೀರಣ್ಣ, ಚನ್ನಗಿರಿ ತಾಲ್ಲೂಕು ನಾಯಕ ಸಮಾಜ ಅಧ್ಯಕ್ಷ ಹೊದಿಗೆರೆ ರಮೇಶ, ನಾಯಕ ವಿದ್ಯಾರ್ಥಿ ನಿಲಯದ ನಿರ್ದೇಶಕರು ಗಳಾದ ಎನ್.ಎಂ. ಆಂಜನೇಯ ಗುರೂಜಿ, ಎ.ಬಿ.ರಾಮ ಚಂದ್ರಪ್ಪ, ಜಯಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎನ್.ಲೋಕೇಶ್ವರ್, ತ್ಯಾವಣಿಗೆ ಗೋವಿಂದಸ್ವಾಮಿ, ಲೋಹಿತ್ ಕುಮಾರ್, ಜ್ಞಾನೇಶ್ ಹಾಗೂ ಇನ್ನಿತರರು ಭಾಗವಹಿಸಿದ್ದರು.