ದಾವಣಗೆರೆ,ಫೆ.11- ಪತ್ರಿಕಾಲಯ ಅಂದರೇನೇ ಹಾಗೆ. ಅದರಲ್ಲೂ ಸುದ್ದಿ ಮನೆಯಲ್ಲಿ ಒತ್ತಡದ ಕೆಲಸ. ಸಂಜೆ ವೇಳೆಯಂತೂ ಬಿಡುವಿಲ್ಲದ ಕೆಲಸ. ಇಂತಹ ಒತ್ತಡದ ನಡುವೆಯೂ ಮಧ್ಯ ಕರ್ನಾಟಕದ ಆಪ್ತ ಒಡನಾಡಿ `ಜನತಾವಾಣಿ’ ಕಚೇರಿಯಲ್ಲಿ ನಿನ್ನೆ ಸಂಜೆ ಸಂಭ್ರಮದ ಮನೆಯಾಗಿತ್ತು.
`ಜನತಾವಾಣಿ’ ಬಳಗದ ಆರು ಜನರು ತಮ್ಮ ವೃತ್ತಿಯಲ್ಲಿ ಸಲ್ಲಿಸುತ್ತಿರುವ ಅನುಪಮ ಸೇವೆಗೆ ಸಂದ ಪುರಸ್ಕಾರಗಳ ಹಿನ್ನೆಲೆಯಲ್ಲಿ `ಜನತಾವಾಣಿ’ ಬಳಗದ ವತಿಯಿಂದ ಏರ್ಪಾ ಡಾಗಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಆರೂ ಜನರನ್ನು ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ಕಾರ್ಯ ನಿರತಪತ್ರಕರ್ತರ ಸಂಘದಿಂದ ಪ್ರತಿಭಾನ್ವಿತ ಮತ್ತು ಹಿರಿಯ ಪತ್ರಕರ್ತರಿಗೆ ಕೊಡಮಾಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ – ಸಾಹಿತಿ ಬಾ.ಮ. ಬಸವರಾಜಯ್ಯ, ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣಾಧಿಕಾರಿಯಾಗಿ ನೇಮಕಗೊಂಡಿರುವ ಹಿರಿಯ ಪತ್ರಕರ್ತ ಎಂ.ಎಸ್. ಶಿವಶರಣಪ್ಪ ಅವರುಗಳನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಜಗಳೂರು ಪುರಸಭೆಯಿಂದ ಕರ್ನಾಟಕ ರಾಜ್ಯೋತ್ಸವ ಗೌರವಕ್ಕೆ ಪಾತ್ರರಾಗಿರುವ ಜಗಳೂರು ತಾಲ್ಲೂಕಿನ ಹಿರಿಯ ಪತ್ರಕರ್ತ ಬಿ.ಪಿ. ಸುಭಾನ್, ಮಲೇಬೆನ್ನೂರಿನ ಪ್ರತಿಷ್ಠಿತ ಶಿವ ವಿವಿಧೋದ್ದೇಶ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಸತತ ಮೂರನೇ ಬಾರಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಜಿಗಳಿ ಪ್ರಕಾಶ್, ದಾವಣಗೆರೆ ಮಹಾನಗರ ಪಾಲಿಕೆಯಿಂದ ಕರ್ನಾಟಕ ರಾಜ್ಯೋತ್ಸವ ಗೌರವಕ್ಕೆ ಭಾಜನರಾಗಿರುವ ದಾವಣಗೆರೆ ವರದಿಗಾರ ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ, ದಾವಣಗೆರೆ ಜಿಲ್ಲಾಡಳಿತದಿಂದ ಕರ್ನಾಟಕ ರಾಜ್ಯೋತ್ಸವ ಗೌರವಕ್ಕೆ ಪುರಸ್ಕೃತರಾಗಿರುವ ಹಿರಿಯ ಛಾಯಾಗ್ರಾಹಕ ಮೊಹಮ್ಮದ್ ರಫೀಕ್ ಅವರುಗಳನ್ನೂ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಗಣಕ ಯಂತ್ರದ ಹಿರಿಯ ನಿರ್ವಾಹಕ ಶಾಮನೂರಿನ ಎಸ್.ಜೆ. ಹನುಮಂತರಾಜ್ ಅವರನ್ನು ಸನ್ಮಾನಿಸಿ, ಶುಭ ಹಾರೈಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ `ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್ ಅವರು ಎಲ್ಲಾ ಸಾಧಕರನ್ನು ಶಾಲು ಹೊದಿಸಿ, ಪೇಟ ತೊಡಿಸಿ ಪುಷ್ಪದೊಂದಿಗೆ ಸನ್ಮಾನಿಸಿ, ಗೌರವಿಸಿ ಶುಭ ಹಾರೈಸಿದರು.
ಕೆಲಸದಲ್ಲಿ ಬದ್ಧತೆ ಮತ್ತು ಆಸಕ್ತಿ ಇದ್ದಾಗ ಯಶಸ್ಸು
– ಎಂ.ಎಸ್. ವಿಕಾಸ್
ನಾವು ಮಾಡುವ ಯಾವುದೇ ಕೆಲಸದಲ್ಲಿ ಬದ್ಧತೆ ಮತ್ತು ಆಸಕ್ತಿ ಹೊಂದಿದಾಗ ಆ ಕೆಲಸದಲ್ಲಿ ಯಶಸ್ಸು ಸಾಧ್ಯ ಎಂದು `ಜನತಾವಾಣಿ’ ಸಂಪಾದಕ ಎಂ.ಎಸ್.ವಿಕಾಸ್ ಪ್ರತಿಪಾದಿಸಿದರು. ಬದಲಾಗುತ್ತಿರುವ ತಂತ್ರಜ್ಞಾನಕ್ಕನುಸಾರವಾಗಿ ಪತ್ರಕರ್ತರು ಡಿಜಿಟಲ್ ವ್ಯವಸ್ಥೆಗೆ ಹೊಂದುಕೊಳ್ಳುವ ಅಗತ್ಯವಿದೆ ಎಂದ ಅವರು, ಸಾಂಪ್ರದಾಯಿಕ ಬರವಣಿಗೆಯಿಂದ ಬದಲಾವಣೆ ಹಾಗೂ ತಂತ್ರಜ್ಞಾನಕ್ಕೆ ಪತ್ರಿಕೆಯ ಸಿಬ್ಬಂದಿಗಳೂ ಶೀಘ್ರವಾಗಿ ಹೊಂದಿಕೊಂಡಿದ್ದರ ಪರಿಣಾಮ ಪತ್ರಿಕೆಯ ಬೆಳವಣಿಗೆಗೆ ಸಮಸ್ಯೆಯಾಗಲಿಲ್ಲ. ಆದರೆ ಪ್ರಸ್ತುತ ದಿನಗಳಲ್ಲಿ ನಾವು ಡಿಜಿಟಲ್ ತಂತ್ರಜ್ಞಾನಕ್ಕೆ ಹಳಬರಾಗುತ್ತಿದ್ದೇವೆ. ಬದಲಾವಣೆಗೆ ಹೊಂದಿಕೊಳ್ಳಲು ವಯಸ್ಸು ಅಡ್ಡಿಬರುವುದಿಲ್ಲ. ಕೆಲಸದಲ್ಲಿ ಆಸಕ್ತಿ ಇರಬೇಕು ಎಂದರು.
ಈ ಸಂದರ್ಭದಲ್ಲಿ ಆಶಯ ನುಡಿಗಳನ್ನಾಡಿದ ವಿಕಾಸ್, ನಮ್ಮ ಬಳಗದ ಸದಸ್ಯರು ಪಡೆದ ಪ್ರಶಸ್ತಿ – ಪುರಸ್ಕಾರಗಳಿಂದಾಗಿ ಜನತಾವಾಣಿ ಪತ್ರಿಕೆಗೆ ಪ್ರತಿಷ್ಠೆ ಮತ್ತು ಗರಿ ಮೂಡಿದಂತಾಗಿದೆ. ಅಲ್ಲದೇ, `ಜನತಾವಾಣಿ’ ಗೆ ಜವಾಬ್ಧಾರಿಯನ್ನು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಬಾ.ಮ. ಬಸವರಾಜಯ್ಯ, ಪತ್ರಕರ್ತರು ಕೇವಲ ವರದಿಗಾಗಿ ಎಂದು ಬರೆಯದೆ, ಅದರ ಒಳ ಹೊಕ್ಕು ಹೊಸ ಸ್ವರೂಪ ನೀಡಿದಾಗ ವರದಿಗಳು ಭಿನ್ನವಾಗಿ ಮೂಡಿಬರುತ್ತವೆ ಎಂದು ಪ್ರತಿಪಾದಿಸಿದರು.
ಯುವ ಪತ್ರಕರ್ತರು ನಿತ್ಯದ ವರದಿಗಳ ಜೊತೆಗೆ ಸ್ಥಳೀಯ ಸಮಸ್ಯೆಗಳ ಕುರಿತು ಲೇಖನಗಳನ್ನು ಬರೆಯಬೇಕು. ಆಗ ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ಅವರು ಹೇಳಿದರು.
ಮತ್ತೋರ್ವ ಸನ್ಮಾನಿತ ಎಂ.ಎಸ್. ಶಿವಶರಣಪ್ಪ ಮಾತನಾಡಿ, `ಜನತಾವಾಣಿ’ ಬಗ್ಗೆ ಸದಾ ಹೆಮ್ಮೆ ಪಡುತ್ತಿದ್ದ ನಾಡಿನ ಹಿರಿಯ ಪತ್ರಿಕೋದ್ಯಮಿಯಾಗಿದ್ದ ಪಾಟೀಲ ಪುಟ್ಟಪ್ಪ ಅವರು `ನಿಮ್ಮಲ್ಲಿ ಪ್ರಬುದ್ಧ ಪತ್ರಕರ್ತರಿದ್ದಾರೆ’ ಎಂದು ಪತ್ರಿಕೆ ಸಂಸ್ಥಾಪಕ ಸಂಪಾದಕ ಹೆಚ್.ಎನ್. ಷಡಾಕ್ಷರಪ್ಪ ಅವರೊಂದಿಗೆ ಮಾತನಾಡುತ್ತಾ ಶ್ಲ್ಯಾಘಿಸುತ್ತಿದ್ದರು. ಇದು ನಮ್ಮಲ್ಲಿನ ಉತ್ಸಾಹ ಹೆಚ್ಚಿಸುತ್ತಿತ್ತು. ಪೈಪೋಟಿಯಿಂದ ಕೆಲಸ ಮಾಡಲು ಪ್ರೇರಣೆಯಾಗುತ್ತಿತ್ತು ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
`ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್ ಸಾರಥ್ಯದಲ್ಲಿ ತಂತ್ರಜ್ಞಾನದ ಜೊತೆ ಹೆಜ್ಜೆ ಹಾಕುವುದನ್ನು ತಾವು ಕಲಿತೆವು ಎಂದು ಹೇಳಿದ ಶಿವಶರಣಪ್ಪ, ವಿಕಾಸ್ `ಸಹೋದ್ಯೋಗಿ ಸ್ನೇಹಿ ಸಂಪಾದಕ’ ಎಂದು ವಿಕಾಸ್ ಅವರ ಪತ್ರಿಕೆ ಮತ್ತು ಸಿಬ್ಬಂದಿ ವರ್ಗದವರ ಜೊತೆಗಿಟ್ಟುಕೊಂಡಿರುವ ಸಂಬಂಧವನ್ನು ಬಣ್ಣಿಸಿದರು.
ಹೆಚ್ಚೆನ್ನೆಸ್ ಅವರೊಂದಿಗೆ 15 ವರ್ಷ ಹಾಗೂ ಎಂ.ಎಸ್. ವಿಕಾಸ್ ಅವರೊಟ್ಟಿಗೆ 20 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದನ್ನು ನೆನಪಿಸಿಕೊಂಡ ಶಿವಶರಣಪ್ಪ, ಬರವಣಿಗೆ ಬಗ್ಗೆ ನಮ್ಮಲ್ಲಿದ್ದ ಉತ್ಸಾಹವೇ ನಮ್ಮನ್ನು ಬೆಳೆಸಿತು ಎಂದರು.
ಸನ್ಮಾನಿತರಾದ ಬಿ.ಪಿ. ಸುಭಾನ್, ಜಿಗಳಿ ಪ್ರಕಾಶ್, ಕೆೆ.ಎನ್. ಮಲ್ಲಿಕಾರ್ಜುನ ಮೂರ್ತಿ ಮತ್ತು ಮೊಹಮ್ಮದ್ ರಫೀಕ್ ಮಾತನಾಡಿ, ವಿಕಾಸ್ ಅವರ ಸಹಕಾರ – ಪ್ರೋತ್ಸಾಹದಿಂದಾಗಿ ಇಂದು ನಾವು ನೆಲೆ ಕಂಡಿದ್ದು, ಈ ಸ್ಥಾನ-ಮಾನಗಳಿಗೆ ಅವರೇ ಕಾರಣರು ಎಂದು ಭಾವನಾತ್ಮಕವಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡು ಕೃತಜ್ಞತೆ ಸಲ್ಲಿಸಿದರು.
ಹಿರಿಯ ಪತ್ರಕರ್ತ ವೀರಪ್ಪ ಎಂ. ಬಾವಿ ಆಶಯ ನುಡಿಗಳನ್ನಾಡಿದರು. `ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್ ಅವರ ಹಿರಿಯ ಪುತ್ರ ಎಂ.ವಿ. ಜಯಧರ, `ಜನತಾವಾಣಿ’ ಹರಿಹರದ ವರದಿಗಾರ ಚಿದಾನಂದ ಕಂಚಿಕೆರೆ, ಭರಮಸಾಗರದ ವರದಿಗಾರ ಬಿ.ಜೆ. ಅನಂತಪದ್ಮನಾಭರಾವ್ ಮತ್ತು ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಾ. ಗಗನ್ ಪ್ರಾರ್ಥನೆಯ ನಂತರ `ಜನತಾವಾಣಿ’ ವರದಿಗಾರ ಎಸ್.ಎ. ಶ್ರೀನಿವಾಸ್ ಸ್ವಾಗತಿಸಿದರು. ಹಿರಿಯ ವರದಿಗಾರ ಒ.ಎನ್.ಸಿದ್ದಯ್ಯ ವಂದಿಸಿದರು. ಉಪ ಸಂಪಾದಕ ಇ.ಎಂ. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ವರದಿಗಾರರಾದ ಉತ್ತಂಗಿ ಕೊಟ್ರೇಶ್, ಬಿ. ಸಿಕಂದರ್, ಜಿ.ಎಸ್. ವಸಂತ ಕುಮಾರ್, ಕೆ.ಎನ್.ಬಸವರಾಜ್, ಹಿರಿಯ ವಿನ್ಯಾಸಕರಾದ ಶ್ರೀಮತಿ ಮಂಜುಳಾ ನಾಗರಾಜ್, ಗಣಕ ಯಂತ್ರದ ಹಿರಿಯ ನಿರ್ವಾಹಕರಾದ ಶ್ರೀಮತಿ ಶೀಲಾ ವೀರಭದ್ರಪ್ಪ, ಸಂಗಮೇಶ್ ಸಾಲಿಮಠ, ವಿನ್ಯಾಸಕಾರ ಕೆ.ಎನ್. ವಿನಯ್, ನಿರ್ವಾಹಕ ಜಾನ್ ಡ್ಯಾನಿಯಲ್ ಮತ್ತು ಇತರರು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸಿದರು.