ನಗರೋತ್ಥಾನ ಹಣದಲ್ಲಿ ತಾರತಮ್ಯ ಬೇಡ

ಹರಿಹರ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಮನವಿ

ಹರಿಹರ, ಫೆ.21- ಅನುದಾನದ ಸಮಾನ ಹಂಚಿಕೆ, ಹಂದಿ ಹಾವಳಿ, ಊರಮ್ಮ ದೇವಿ ಹಬ್ಬ, ಹಕ್ಕು ಪತ್ರ ವಿತರಣೆ, ಕಂದಾಯ ಹೆಚ್ಚಳಕ್ಕೆ ವಿರೋಧ, ಡೋರ್ ನಂಬರ್‌ ನೀಡಲು ಒಪ್ಪಿಗೆ ಮುಂತಾದ ವಿಷಯಗಳ ಬಗ್ಗೆ ಇಂದಿಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.

ನಗರಸಭೆ ಸಭಾಂಗಣದಲ್ಲಿ  ಅಧ್ಯಕ್ಷೆ ರತ್ನ ಡಿ.ಉಜ್ಜೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ,  ನಗರೋತ್ಥಾನದ ಅಡಿಯಲ್ಲಿ ಬಿಡುಗಡೆಯಾಗಿರುವ 30 ಕೋಟಿ ರೂ. ಅನುದಾನವನ್ನು ತಾರತಮ್ಯ ಮಾಡದೆ ಎಲ್ಲಾ ವಾರ್ಡಿನ ಅಭಿವೃದ್ಧಿಗೆ  ಹಂಚಿಕೆ ಮಾಡಬೇಕು ಎಂದು ಎ. ಮಾನಮೂರ್ತಿ ಹೇಳಿದರು. 

ವಾರ್ಡಿನಲ್ಲಿ ರೋಗ ನಿರೋಧಕ ಔಷಧಿ ಸಿಂಪಡಣೆ ಮಾಡಿಲ್ಲ. ಸ್ವಚ್ಚತೆ ಮಾಡುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ. ನಗರಸಭೆಯ ಸಿಬ್ಬಂದಿಗಳಿಗೆ ಪ್ರಮೋಷನ್ ಮೇಲೆ ಇತರೆ ನಗರಕ್ಕೆ ಕಳಿಸಿದರೆ ಇಲ್ಲಿನ ಜನರಿಗೆ ತೊಂದರೆ ಆಗುತ್ತದೆ. ಆದ್ದರಿಂದ ಬೇರೆ ನಗರಗಳಿಗೆ ಕಳಿಸಬೇಡಿ ಎಂದು ಹೇಳಿದರು.

ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ,  ನಗರೋತ್ಥಾನದ ಅನುದಾನ ಸರ್ಕಾರಕ್ಕೆ ವಾಪಸ್ ಹೋಗದಂತೆ ನೋಡಿಕೊಳ್ಳಿ ಎಂದರು. 4 ತಿಂಗಳಾದರೂ ಜೆಸಿಬಿ ರಿಪೇರಿಯಾಗಿಲ್ಲ. ಊರಮ್ಮ ದೇವಿ ಹಬ್ಬದ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿಗೆ ಜೆಸಿಬಿ ಅಗತ್ಯವಿದ್ದು ಶೀಘ್ರ ರಿಪೇರಿ ಮಾಡಿಸುವಂತೆ ಹೇಳಿದರು.

ಫೈಲ್‌ಗಳು ನಾಪತ್ತೆಯಾಗುತ್ತಿವೆ. ಕಂದಾಯ ದಾಖಲೆಗಳ ನಿರ್ವಹಣೆ ಸರಿಯಾಗಿಲ್ಲ ಎಂದು ದೂರಿದ ಅವರು,  1 ಜೆರಾಕ್ಸ್ ಯಂತ್ರ ಖರೀದಿಸುವಂತೆ ಸಲಹೆ ನೀಡಿದರು.

ಸದಸ್ಯ ಆರ್.ಸಿ. ಜಾವೇದ್ ಮಾತನಾಡಿ, ಈ ಹಿಂದೆ ಬಿಡುಗಡೆಯಾಗಿದ್ದ 8 ಕೋಟಿ ರೂ. ಅನುದಾನ ಖರ್ಚು ಮಾಡದೆ ವಾಪಸ್ಸು ಹೋಗಿತ್ತು. ಈಗ ಮತ್ತೆ ಬಿಡುಗಡೆಯಾಗಿದೆ ಎಂಬ ಮಾಹಿತಿ ಇದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸದಸ್ಯ ರಜನಿಕಾಂತ್, ನಗರೋತ್ಥಾನ ಅಡಿಯಲ್ಲಿ ನಮ್ಮ ವಾರ್ಡಿಗೆ ಹೆಚ್ಚು ಅನುದಾನ ನೀಡಿಲ್ಲ. ತಾರತಮ್ಯ ಸರಿ ಪಡಿಸಿ ಎಂದು ಹೇಳಿದರು. ಎಸ್.ಎಂ. ವಸಂತ್, ನಗರಸಭೆ ಕಂದಾಯ ಹೆಚ್ಚಳ ಬೇಡ ಎಂದಾಗ, ಸರ್ವ ಸದಸ್ಯರೂ ಬೆಂಬಲ ವ್ಯಕ್ತಪಡಿಸಿದರು.

ಹನುಮಂತಪ್ಪ ಮಾತನಾಡಿ ನಗರದ ಆಶ್ರಯ ಬಡಾವಣೆಯಲ್ಲಿ  ಮನೆ ಹಕ್ಕು ಪತ್ರವನ್ನು ನೀಡದ ಕಾರಣ ಬ್ಯಾಂಕುಗಳು ಸಾಲ ನೀಡುತ್ತಿಲ್ಲ ಎಂದರು.

ಹಂದಿಗಳ ಹಾವಳಿ ನಿಯಂತ್ರಿಸಬೇಕು, ಪೌರಕಾರ್ಮಿಕರು ಬೆಳಗ್ಗೆ ಮುಖ ತೋರಿಸಿ ನಂತರ ಮನೆಗೆ ಹೋಗುತ್ತಾರೆ ಇದರಿಂದಾಗಿ ವಾರ್ಡಿನಲ್ಲಿ ಕಸದ ರಾಶಿ ಬಹಳ ಇದ್ದರೂ ಹೇಳೋರು ಕೇಳೋರು ಇಲ್ಲ ಎಂದು ಅಶ್ವಿನಿ ಕೃಷ್ಣ  ಆರೋಪಿಸಿದರು.

ಪೌರಾಯುಕ್ತೆ ಎಸ್.ಲಕ್ಷ್ಮಿ ಮಾತನಾಡಿ, ನಗರೋತ್ಥಾನ ಅನುದಾನ ವಿಚಾರದಲ್ಲಿ  ಅಧಿಕಾರಿಗಳು  ವಿಳಂಬ ಮಾಡಿರುವುದಿಲ್ಲ. ಇನ್ನೂ ಎರಡು ದಿನಗಳಲ್ಲಿ ಎಲ್ಲಾ ಕಡತಗಳನ್ನು ಸರಿ ಮಾಡಲಾಗುತ್ತದೆ. ಆಶ್ರಯ ಬಡಾವಣೆಯ ನಿವಾಸಿಗಳಿಗೆ ಹಿಂದೆ 80 ಮನೆಗಳಿಗೆ ಹಕ್ಕು ಪತ್ರವನ್ನು ನೀಡಲಾಗಿದೆ. ಇನ್ನೂ 460 ಮನೆಗಳಿಗೆ ಆಶ್ರಯ ಸಮಿತಿಯ ಗಮನಕ್ಕೆ ತಂದು  ಹಕ್ಕುಪತ್ರ ನೀಡಲಾಗುತ್ತದೆ ಎಂದರು.

ನಗರಸಭೆಗೆ ಪೌರಕಾರ್ಮಿಕರ ಕೊರತೆ ಇದ್ದರೂ, ನೇಮಕಕ್ಕೆ ಅವಕಾಶ ಇಲ್ಲದ ಕಾರಣ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ವಾರ್ಡುಗಳಿಗೆ  ಭೇಟಿ ಮಾಡಿ ಪೌರ ಕಾರ್ಮಿಕರ ಕರ್ತವ್ಯಲೋಪ ಸರಿಪಡಿಸುವುದಾಗಿ ಹೇಳಿದರು. ಎರಡು ದಿನಗಳಲ್ಲಿ ಜೆಸಿಬಿ ದುರಸ್ತಿ ಮಾಡಿಸುವುದಾಗಿ ಹೇಳಿದರು.

ನಗರಸಭೆ ಉಪಾಧ್ಯಕ್ಷ ಬಾಬುಲಾಲ್, ಸದಸ್ಯರಾದ ಪಿ.ಎನ್ ವಿರುಪಾಕ್ಷ,, ದಿನೇಶ್ ಬಾಬು, ಜಂಬಣ್ಣ ಗುತ್ತೂರು, ನಿಂಬಕ್ಕ ಚಂದಾಪೂರ್, ಪಕ್ಕೀರಮ್ಮ, ಉಷಾ ಮಂಜುನಾಥ್, ಸುಮಿತ್ರಾ ಮರಿದೇವ್, ನಾಗರತ್ನ, ಲಕ್ಷ್ಮಿ ಮೋಹನ್,  ದಾದಾ ಖಲಂದರ್, ಮುಜಾಮಿಲ್ ಬಿಲ್ಲು, ಶಾವಿನಾ ದಾದಾಪೀರ್, ಶಾಹಜಾದ್  ಸನಾವುಲ್ಲಾ, ಬಿ. ಅಲ್ತಾಫ್, ಕೆ.ಜಿ. ಸಿದ್ದೇಶ್, ಇಬ್ರಾಹಿಂ, ಅಬ್ದುಲ್ ಅಲಿಂ, ನಾಮನಿರ್ದೇಶನ ಸದಸ್ಯರಾದ ರಾಘವೇಂದ್ರ, ಮಹಾಂತೇಶ್ ಭಂಡಾರಿ, ಸುರೇಶ್ ತೆರದಾಳ್‌, ಸುಧಾ ಸೋಳಂಕಿ, ಸಿಬ್ಬಂದಿಗಳಾದ ಮಂಜುನಾಥ್, ತಿಪ್ಪೇಸ್ವಾಮಿ ಇತರರು ಹಾಜರಿದ್ದರು. 

error: Content is protected !!