ಹರಿಹರ,ಫೆ.21- ಹರಿಹರಕ್ಕೆ ನಿನ್ನೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ನಂತರ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಇಲ್ಲದಿರುವುದು, ಹೊಸ ಜಾತಿ, ಜನಾಂಗಗಳ ಸೇರ್ಪಡೆಯಿಂದಾಗಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಜಾತಿ ಜನಾಂಗದವರಿಗೆ ಮೀಸಲಾತಿಯ ಪರಿಪೂರ್ಣ ಉಪಯೋಗ ಸಿಗದಂತಾಗಿದೆ.
ಇಂತಹ ದುಸ್ಥಿತಿಯಲ್ಲಿ ಬೇಡ ಜಂಗಮ, ಬುಡ್ಗ ಜಂಗಮರೆಂದು ಅನರ್ಹ ವೀರಶೈವ ಜಂಗಮ, ಜನಾಂಗದವರೂ ಕೂಡ ಪರಿಶಿಷ್ಟ ಜಾತಿ (ಎಸ್ಸಿ) ಪ್ರಮಾಣ ಪತ್ರವನ್ನು ಅಕ್ರಮವಾಗಿ ಪಡೆಯುತ್ತಿದ್ದಾರೆ. ಇದಕ್ಕಾಗಿ ಕಂದಾಯ ಇಲಾಖೆಯಲ್ಲಿರುವ ಕೆಲವು ಭ್ರಷ್ಟ, ಸ್ವಜಾತಿ ಪ್ರೇಮದ ಅಧಿಕಾರಿಗಳು ಕೈಜೋಡಿಸಿದ್ದಾರೆ.
ಸುಳ್ಳು ಜಾತಿ ಪ್ರಮಾಣ ಪಡೆದಿರುವ ಅನರ್ಹರನ್ನು ಪತ್ತೆ ಹಚ್ಚಿ ಹಾಗೂ ಈ ಜಾತಿ ಪ್ರಮಾಣ ಪತ್ರ ನೀಡಿರುವ ಸಂಬಂಧಿತ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು.
ಎಸ್ಸಿ ಪಟ್ಟಿಯಲ್ಲಿರುವ ಮಾದಿಗ ಜನಾಂಗದವರಿಗೆ ಮೀಸಲಾತಿಯ ಲಾಭ ಪರಿಪೂರ್ಣವಾಗಿ ದೊರೆಯುತ್ತಿಲ್ಲ. ರಾಜ್ಯದಲ್ಲಿ ಮಾದಿಗರ ಸ್ಥಿತಿ, ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ. ಹೀಗಾಗಿ ಮಾದಿಗ ಜನಾಂಗದವರಿಗೆ ನ್ಯಾ.ಎ.ಜೆ. ಸದಾಶಿವ ವರದಿಯನ್ವಯ ಒಳ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕಿದೆ ಎಂದು ಮಹಾಂತೇಶ್ ಒತ್ತಾಯಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ದಮನಿತರ, ದಲಿತರ, ಮಹಿಳೆಯರ ಪರ 80ರ ದಶಕದಲ್ಲಿ ಧ್ವನಿ ಎತ್ತಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಸ್ಥಾಪಿಸಿದ ಹರಿಹರದವರೇ ಆದ ಪ್ರೊ.ಬಿ.ಕೃಷ್ಣಪ್ಪರ ಮೂಲ ಮನೆ ಹರಿಹರದ ಎ.ಕೆ.ಕಾಲೋನಿಯಲ್ಲಿದೆ. ಈ ಮನೆಯು ಈಗ ಶಿಥಿಲಾವಸ್ಥೆ ತಲುಪಿದ್ದು, ಈ ಮನೆಯನ್ನು ಸ್ಮಾರಕವಾಗಿ ರೂಪಿಸಬೇಕು ಎಂದು ಕೋರಿಕೊಂಡರು.
ಜಿಲ್ಲಾ ಮಹಿಳಾ ಸಂಚಾಲಕರಾದ ವಿಜಯಲಕ್ಷ್ಮಿ, ಜಿಗಳಿ ಹಾಲೇಶ್, ಗುಳದಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ಲಕ್ಷ್ಮಿ ಮಂಜಪ್ಪ, ಹರಳಹಳ್ಳಿ ಗ್ರಾಪಂ. ಸದಸ್ಯ ಎಚ್.ಎಂ.ಹನುಮಂತಪ್ಪ, ನಿಂಗರಾಜ್, ಮಲ್ಲನಾಯಕನಹಳ್ಳಿ ಗುಡದಪ್ಪ ಹಾಗೂ ಇತರರಿದ್ದರು.