ರಾಜಕಾರಣಿಗಳು ಸ್ವಾರ್ಥಕ್ಕಾಗಿ ಸಮಾಜದ ಸ್ವಾಸ್ಥ್ಯ ಕದಡಬಾರದು

ಹೊನ್ನಾಳಿ, ಫೆ.20- ಪ್ರತಿಯೊಬ್ಬ ನಾಗರಿಕನು, ನಾನು ಭಾರತೀಯ ಎಂಬ ಮನೋಭಾವನೆಯನ್ನು ಮೂಡಿಸಿಕೊಳ್ಳಬೇಕು. ಪ್ರಾದೇಶಿಕ ಅಸಮ ತೋಲನ ನಿವಾರಣೆ ಯಾಗಬೇಕು. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಸಮಾಜದ ಸ್ವಾಸ್ಥ್ಯ ಕದಡಬಾರದು. ಮತದಾರರು ಜಾಗೃತರಾಗಬೇಕು ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು. 

ಹೊನ್ನಾಳಿ ತಾಲ್ಲೂಕು ಹೊಟ್ಯಾಪುರ ಗ್ರಾಮದ ಉಜ್ಜಯಿನಿ ಶಾಖಾ ಹಿರೇಮಠದ ನೂತನ ಶಿಲಾ ಮಠದ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಧರ್ಮಸಭೆಯಲ್ಲಿ ಮಾತನಾಡಿದರು. 

ಪ್ರೀತಿ, ಸಂಸ್ಕಾರ, ಲೌಕಿಕ ಶಿಕ್ಷಣ, ಅನ್ನ ದಾಸೋಹ ಹಾಗೂ ತಮ್ಮ ತಪಸ್ಸಿನ ಶಕ್ತಿಯಿಂದ ಭಕ್ತರ ಕಷ್ಟಗಳನ್ನು ದೂರ ಮಾಡುತ್ತಿದ್ದಾರೆ. ಸನಾತನ ಧರ್ಮವನ್ನು ಜಗತ್ತಿನಲ್ಲಿ ಉಳೆಸಿ, ಬೆಳಸಿಕೊಂಡು ಹೋಗುವ ಕೆಲಸ, ಕಾರ್ಯಗಳನ್ನು ವೀರಶೈವ ಪಂಚಪೀಠಗಳಡಿಯಲ್ಲಿ ಮಠಗಳು ಮಾಡುತ್ತಿವೆ. ಹೊಟ್ಯಾಪುರ ಹಿರೇಮಠದಲ್ಲಿಯೂ ಬಡವರಿಗೆ ಶಿಕ್ಷಣ ನೀಡುವ ಕಾರ್ಯವಾಗಬೇಕು. ಮಠಗಳಿರುವುದು ಭಕ್ತರಿಗಾಗಿ. ಇಂದಿನ ಮಠಗಳ ಚಿಂತನೆಯೇ ಬೇರೆಯಾಗಿರುವುದು ವಿಷಾದದ ಸಂಗತಿ ಎಂದರು. 

ಹೊನ್ನಾಳಿ ಹಿರೇಕಲ್ಮಠದ ಶ್ರೀ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ರಾಂಪುರದ ಲಿಂಗೈಕ್ಯ ಗುರುಗಳು ಹಾಗೂ ಹೊಟ್ಯಾಪುರದ ಶ್ರೀಗಳು ಸಹೋದರರಂತೆ ಇದ್ದರು. ಗುರುದ್ವಯರಿಬ್ಬರೂ ಪಂಚ ಪೀಠಗಳ ಬಣ್ಣದ ವಸ್ತ್ರಗಳನ್ನು ಧರಿಸುವ ಮೂಲಕ ಪಂಚತತ್ವಗಳನ್ನು ಭಕ್ತರಿಗೆ ಹಂಚಿದ್ದಾರೆ ಎಂದರು. 

ಹೊಟ್ಯಾಪುರ ಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಉತ್ತರ ಕರ್ನಾಟಕದಿಂದ ಕೊಟ್ಟೂರು, ಕಮ್ಮಾರಗಟ್ಟೆಯಿಂದ ಹೊಟ್ಯಾಪುರದಲ್ಲಿ ನೆಲೆನಿಂತ ಮಠ ನಮ್ಮದಾಗಿದೆ. ಗಿರಿಸಿದ್ದೇಶ್ವರ ಬೆಟ್ಟದಲ್ಲಿ ತಪಸ್ಸನ್ನು ಆಚರಿಸಿದ ನಮ್ಮ ವಂಶದ ಸಿದ್ದಯ್ಯ ನೆಲೆಸಿದರು. ಮೂಲ ಕರ್ತೃಗದ್ದುಗೆ ಮಠವು ಶಿಥಿಲಗೊಂಡಿದೆ. ಭಕ್ತರ ಆಶಯದಂತೆ ಶಿಲಾಮಠ ಸ್ಥಾಪಿಸುವ ಸಂಕಲ್ಪ ಕೈಗೊಂಡಿರುವುದಾಗಿ ತಿಳಿಸಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾದ ಬಳಿಕ ಅವಳಿ ತಾಲ್ಲೂಕಿನ ಅಭಿವೃದ್ಧಿಗೆ 100ಕ್ಕೂ ಹೆಚ್ಚು ಕೋಟಿ ಅನುದಾನವನ್ನು ತಂದಿದ್ದೇನೆ. ಶಿಲಾಮಠದ ನಿರ್ಮಾಣಕ್ಕೆ ಸರ್ಕಾರದಿಂದ 50 ಲಕ್ಷ ಅನುದಾನ ಮಂಜೂರು ಮಾಡಿಸುವುದಾಗಿ ತಿಳಿಸಿದರು. 

ಶಿವಮೊಗ್ಗ ವಿಭಾಗದ ಪ್ರಭಾರಿ (ಬಿಜೆಪಿ) ಗಿರೀಶ್ ಪಾಟೀಲ್ ಮಾತನಾಡಿ, ಹೊಟ್ಯಾಪುರ ಮಠಕ್ಕೆ ಹೊಂದಿಕೊಂಡಿರುವ ಹಿರೇಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಿಸುವ ಭರವಸೆಯನ್ನು ಗ್ರಾಮೀಣಾಭಿವೃದ್ಧಿ ಸಚಿವರು ನೀಡಿದ್ದಾರೆ ಎಂದು ತಿಳಿಸಿದರು. 

ಮಾಜಿ ಶಾಸಕ ಡಿ.ಜಿ ಶಾಂತನಗೌಡ್ರು, ಹಾಲು ಒಕ್ಕೂಟದ ಉಪಾಧ್ಯಕ್ಷ ಎಚ್.ಕೆ. ಬಸಪ್ಪ ಮಾತನಾಡಿದರು. ಸಭೆಯಲ್ಲಿ ಜಿ.ಪಂ. ಮಾಜಿ ಸದಸ್ಯರುಗಳಾದ ಸುರೇಂದ್ರ ನಾಯ್ಕ್, ಕುಳಗಟ್ಟೆ ಎ.ಆರ್.ಚಂದ್ರಶೇಖರಪ್ಪ, ಎಪಿಎಂಸಿ ಅಧ್ಯಕ್ಷ ಜಿ.ವಿ.ಎಂ. ರಾಜು, ರಾಂಪುರ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸುಶೀಲಮ್ಮ ಇದ್ದರು. 

error: Content is protected !!