ದಾವಣಗೆರೆ, ಫೆ.21- ನಗರದ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಸಂಸ್ಥೆಯ ಡೆಂಟಲ್ ಕಾಲೇಜಿನ ಬಿ.ಎಸ್.ಸಿ. ಎಕ್ಸ್‍ಕ್ಲೂಸಿವ್ ಶಾಖೆಗೆ ರಾಮ್‍ರಾಜ್ ಕಾಟನ್ ಸ್ಥಾಪಕರೂ ಆದ ಛೇರ್ಮನ್ ಕೆ.ಆರ್. ನಾಗರಾಜನ್ ಅವರು ಇಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿ.ಎಸ್.ಚನ್ನಬಸಪ್ಪ ಸನ್ಸ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜನ್, ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ತಾವು 25 ವರ್ಷಗಳ ಹಿಂದೆ ದಾವಣಗೆರೆಗೆ ಬಂದಾಗ ಬಿ.ಎಸ್.ಸಿ. ಸಂಸ್ಥೆಯ ಮಾಲೀಕ ಬಿ.ಸಿ.ಶಿವಕುಮಾರ್ ಅವರನ್ನು ಭೇಟಿ ಮಾಡಿ, ನಮ್ಮ ರಾಮ್‍ರಾಜ್ ಉತ್ಪನ್ನಗಳನ್ನು ಪರಿಚಯಿಸಿ ಎಂದು ವಿನಂತಿಸಿದ್ದೆ. ಅಂದು ಈ ರೀತಿ ಪ್ರಾರಂಭವಾದ ವ್ಯಾವಹಾರಿಕ ಸಂಬಂಧವು ಇಂದಿನವರೆಗೂ ಯಶಸ್ವಿಯಾಗಿ ನಡೆಯುತ್ತಿದೆ. ಹಾಗೆಯೇ ಕರ್ನಾಟಕದಲ್ಲಿ ಬಿ.ಎಸ್.ಸಿ. ಸಂಸ್ಥೆಯು ರಾಮ್‍ರಾಜ್ ಉತ್ಪನ್ನಗಳ ನಂಬರ್ ಓನ್ ರಿಟೇಲರ್ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯಾವುದೇ ಒಂದು ಸಂಸ್ಥೆಯು ಉನ್ನತ ಮಟ್ಟಕ್ಕೆ ಬೆಳೆಯಬೇಕೆಂದರೆ ಸಂಸ್ಥೆಯ ಸಿಬ್ಬಂದಿ ವರ್ಗದವರೇ ಮುಖ್ಯ ಪಾತ್ರಧಾರಿಗಳು ಹಾಗೂ ಸಂಸ್ಥೆಯ ಆಸ್ತಿಯಾಗಿರುತ್ತಾರೆ ಎಂದು ಅವರು ಹೇಳಿದರು.
ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಸಂಸ್ಥೆಯ ಮಾಲೀಕರುಗಳಾದ ಬಿ.ಸಿ.ಶಿವಕುಮಾರ್, ಬಿ.ಯು. ಚಂದ್ರಶೇಖರ್, ಶ್ರೀಮತಿ ದೀಪಾ ಶಿವಕುಮಾರ್, ಬಿ.ಎಸ್.ಮೃನಾಲ್ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.