ದಾವಣಗೆೇೆೇರೆ, ಫೆ.20- ಭಾರತದಲ್ಲಿ ಇರುವಷ್ಟು ದೇಗುಲಗಳು ಜಗತ್ತಿನ ಯಾವ ರಾಷ್ಟ್ರಗಳಲ್ಲೂ ಕಾಣಲು ಸಾಧ್ಯವಿಲ್ಲ. ದೇವರು ಮತ್ತು ಧರ್ಮ ಭಾರತೀಯರ ಜೀವಾಳ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ನಗರದ ಹೊರ ವಲಯದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ನಿರ್ಮಿಸಿರುವ ಶ್ರೀಶೈಲ ಮಲ್ಲಿಕಾರ್ಜುನ, ಶ್ರೀ ಹೇಮರೆಡ್ಡಿ ಮಲ್ಲಮ್ಮ, ಶ್ರೀ ವೇಮನ ದೇವಸ್ಥಾನ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಶ್ರೀಗಳು ಮಾತನಾಡಿದರು.
ಸನಾತನ ಧರ್ಮವನ್ನು ಪಾಲಿಸುತ್ತಿರುವ ಭಾರತೀಯರು, ದೇವರು ಮತ್ತು ಧರ್ಮದ ಮೇಲೆ ಅತೀವ ಶ್ರದ್ಧಾ-ಭಕ್ತಿಯನ್ನು ಹೊಂದಿದ್ದಾರೆ. ಆದ್ದರಿಂದಲೇ ಭಾರತದಲ್ಲಿ ದೇವರು ಮತ್ತು ಧರ್ಮ ಪ್ರತಿಯೊಬ್ಬರ ಜೀವಾಳ ಎಂದು ಹೇಳಲಾಗುತ್ತದೆ ಎಂದರು.
ಲಿಂ. ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಶೈಲದಲ್ಲಿ ನಡೆಸಿದ ಜಾಗೃತಿ ಕಾರ್ಯಕ್ರಮ, ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನಿರ್ಮಿಸಿದ ಹೇಮರೆಡ್ಡಿ ಮಲ್ಲಮ್ಮನವರ ಸ್ಮಾರಕ ಹಾಗೂ ಶ್ರೀಶೈಲದಲ್ಲಿನ ಕಾರ್ಯಕ್ರಮಗಳನ್ನು ಗಮನಿಸುತ್ತಾ ಬಂದ ಆಂಧ್ರ ಸರ್ಕಾರ, ಶ್ರೀಶೈಲ ಪೀಠಕ್ಕೆ 10 ಎಕರೆ ಜಾಗ ಮಂಜೂರು ಮಾಡಿದೆ. ಮೊದಲ ಹಂತದಲ್ಲಿ ನೀಡಿರುವ 5 ಎಕರೆ ಜಾಗದಲ್ಲಿ ಮೂರು ಎಕರೆ ಜಾಗದಲ್ಲಿ ಹೇಮರೆಡ್ಡಿ ಮಲ್ಲಮ್ಮ ದೇಗುಲ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಶ್ರೀಶೈಲ ಪೀಠವು ಮಾಡುತ್ತಾ ಬಂದಿರುವ ಹೇಮರೆಡ್ಡಿ ಮಲ್ಲಮ್ಮ ಮತ್ತು ಶ್ರೀಶೈಲ ಮಲ್ಲಿಕಾರ್ಜುನರ ಕುರಿತ ಕಾರ್ಯಗಳನ್ನು ನೋಡಿ ಈ ಜಾಗ ಮಂಜೂರು ಮಾಡಿದ್ದಾರೆ ಎಂದ ತಿಳಿಸಿದರು.
ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಭಾವನಾ ಜೀವಿಯಾದ ಹೇಮರೆಡ್ಡಿ ಮಲ್ಲಮ್ಮ ಶ್ರದ್ಧೆ ಮತ್ತು ಭಕ್ತಿ ಎಂಬ ಅಸ್ತ್ರದ ಮೂಲಕ ಇಡೀ ಸಮಾಜದ ಮೇಲೆ ಬೆಳಕು ಚೆಲ್ಲಿದ ಮಹಾನ್ ಶರಣೆ ಎಂದು ಬಣ್ಣಿಸಿದರು.
ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ ಮಹಿಳೆಯರಿಗೆ ಮಾದರಿಯಾಗಿದೆ. ಜೀವನದ ಸವಾಲುಗಳು, ಸಮಸ್ಯೆಗಳ ನಡುವೆಯೂ ಸಾಧಿಸಿ ತೋರಿಸಿದವರು ಮಹಾನ್ ಶಿವಶರಣೆ ಮಲ್ಲಮ್ಮ ಎಂದು ತಿಳಿಸಿದರು.
ಹಳ್ಳಿಗಳು ಹುಟ್ಟುವ ಮೊದಲೇ ದೇವಸ್ಥಾನಗಳನ್ನು ಕಟ್ಟಿಕೊಂಡು ಬರಲಾಗುತ್ತಿದೆ. ಹಾಗಾಗಿ ಭಾರತದಲ್ಲಿ ದೇಗುಲಗಳ ನಿರ್ಮಾಣ ಅನಿವಾರ್ಯವಾಗಿದೆ. ದಕ್ಷಿಣ ಭಾರತದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ 37 ಸಾವಿರ ದೇವಾಲಯಗಳಿವೆ. ಇವೆಲ್ಲವೂ ಮಾನವ ಶಕ್ತಿಯ ಪ್ರತೀಕ ಎಂದರು.
ನಿಚ್ಚವ್ವನಹಳ್ಳಿ ಶ್ರೀಹಾಲಸ್ವಾಮಿಜೀ ನೇತೃತ್ವ ವಹಿಸಿದ್ದರು. ಸಮಾಜದ ಜಿಲ್ಲಾಧ್ಯಕ್ಷ ಡಾ. ಕೊಟ್ರೇಶ್ ಬಿದರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಡಾ. ಶೇಖರಗೌಡ ಮಾಲಿ ಪಾಟೀಲ್, ಡಾ. ಜಿ.ಎನ್. ಶಿವಲಿಂಗಮೂರ್ತಿ, ಯರಬಳ್ಳಿ ಉಮಾಪತಿ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ರೇವಣಸಿದ್ಧಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಕುಸುಮಾ ಲೋಕೇಶ್, ಸುಮತಿ ಜಯ್ಯಪ್ಪ ಕಾರ್ಯಕ್ರಮ ನಿರೂಪಿಸಿದರು. ಶಂಕರ್ ಪಾಟೀಲ್ ಸ್ವಾಗತಿಸಿದರು.