ದಾಖಲೆ ರಹಿತ ಜನವಸತಿ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ

ಹರಪನಹಳ್ಳಿ, ಫೆ.20-  ರಾಜ್ಯದಲ್ಲಿರುವ ದಾಖಲೆ ರಹಿತ ಜನವಸತಿ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು ಎಂದು ಮಾಜಿ ಸಚಿವ ಶಿವಮೂರ್ತಿನಾಯ್ಕ  ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಪಟ್ಟಣದ  ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿ, ರಾಜ್ಯದಲ್ಲಿ ಗೊಲ್ಲಹಟ್ಟಿ, ವಡ್ಡರಹಟ್ಟಿ, ನಾಯಕರಹಟ್ಟಿ, ಕುರುಬರಹಟ್ಟಿ, ಲಂಬಾಣಿ ತಾಂಡಾ, ಹಾಡಿ, ದೊಡ್ಡಿ, ಕಾಲೋನಿ, ಪಾಳ್ಯ ಇತ್ಯಾದಿ 58 ಸಾವಿರ ದಾಖಲೆ ರಹಿತ ಜನವಸತಿ ಪ್ರದೇಶಗಳಿವೆ ಎಂದು ಹೇಳಿದರು.

ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಮಸೂದೆಯನ್ನು 2017 ರಲ್ಲಿ ವಿಧಾನಸಭೆಯಲ್ಲಿ ಒಪ್ಪಿಗೆ ಮತ್ತು ರಾಷ್ಟ್ರಪತಿ ಅಂಕಿತ ಸಹ ಆಗಿದೆ. ಆದರೆ  ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿಲ್ಲ ಎಂದು ದೂರಿದರು.

ದಾಖಲೆ ಇಲ್ಲದ ಕಾರಣಕ್ಕಾಗಿ ಆ ಪ್ರದೇಶದ ಜನರ ಜಾಗಗಳಿಗೆ ಹಕ್ಕುಪತ್ರ,  ಸಾಲ- ಸೌಲಭ್ಯ ಇತರೆ ಸೌಕರ್ಯ ಸಿಗುವುದಿಲ್ಲ ಎಂದು ಅವರು ಹೇಳಿದರು.

ಸ್ವಯಂ ಪ್ರಕರಣ ದಾಖಲಿಸಿಕೊಂಡು,  ಇಂತಹ ಪ್ರದೇಶಗಳನ್ನು ಕಂದಾಯ ಗ್ರಾಮ ಗಳಾಗಿ ಪರಿವರ್ತಿಸಲು ಸುಪ್ರಿಂಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು. ಈ ಕುರಿತು ಲೋಕಸಭಾ ಸಭಾಪತಿ ಗಳಿಗೂ ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.

ಹಟ್ಟಿ, ತಾಂಡಾಗಳು ಕಂದಾಯ ಗ್ರಾಮ ಆಗದೇ ಹೋದರೆ 2ನೇ ದರ್ಜೆ ಪ್ರಜೆಗಳಾಗಿ ಇರಬೇಕಾಗುತ್ತದೆ. ನಾವುಗಳು ರಾಜ್ಯದಲ್ಲಿ 1ನೇ ದರ್ಜೆ ಪ್ರಜೆಗಳಾಗಿ ಕಾರ್ಯನಿರ್ವಹಿಸ ಬೇಕಾದರೆ, ಸೌಲಭ್ಯದಿಂದ ವಂಚಿತವಾಗಿರುವ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿದಾಗ ಮಾತ್ರ 1ನೇ ದರ್ಜೆಯ ಪ್ರಜೆಗಳಾಗಿ ಉಳಿಯುವುದಕ್ಕೆ ಸಾಧ್ಯವಾಗುತ್ತದೆ. ಎಂದರು

ಪಂಚ ರಾಜ್ಯಗಳ ಚುನಾವಣೆ ಮುಗಿದ ಬಳಿಕ ರಾಜ್ಯ ಕೆ.ಪಿ.ಸಿ.ಸಿ ಪುನರ್ ರಚನೆ ಆಗುವ ಸಾಧ್ಯತೆಯಿದೆ. ನಾನು ಕೂಡ ಕೆ.ಪಿ.ಸಿ.ಸಿ.ಯಲ್ಲಿ ಒಂದು ಹುದ್ದೆಯ ಆಕಾಂಕ್ಷಿ ಇದ್ದೇನೆ. ಕಾಂಗ್ರೆಸ್ ಹೈಕಮಾಂಡ್ ಮೇಲೆ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಜಾಬ್ ಮತ್ತು ಕೇಸರಿಗೆ ಸಂಬಂಧಪಟ್ಟ ವಿಚಾರ ನ್ಯಾಯಾಲಯದಲ್ಲಿದೆ. ನಾವು ದೇಶದ ಸಂವಿಧಾನವನ್ನು ಗೌರವಿಸಬೇಕು. ನ್ಯಾಯಾಲಯದ ತೀರ್ಪು ಬರಬೇಕಾಗಿದೆ. ಹಿಜಾಬ್ ಎನ್ನುವುದು ಅವರವರ ಸಂಸ್ಕೃತಿ, ವಿರೋಧ ಮಾಡುವುದು ಸರಿಯಲ್ಲ. ಸಚಿವ ಈಶ್ವರಪ್ಪ ಬಿಜೆಪಿಯ ಹಿರಿಯ ರಾಜಕಾರಣಿ. ಅವರ ಬಾಯಿಯಲ್ಲಿ  ರಾಷ್ಟ್ರದ್ರೋಹದ  ಮಾತುಗಳು ಬರಬಾರದು. ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದರು.

error: Content is protected !!