ದಾವಣಗೆರೆ, ಫೆ.18- ಸಾಂಪ್ರದಾಯಿ ಕೃಷಿ ಪದ್ಧತಿ ಜೊತೆಗೆ ತಂತ್ರಜ್ಞಾನವನ್ನೂ ಅಳವಡಿಸಿಕೊಂಡಾಗ ಕೃಷಿಯಲ್ಲಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಹೇಳಿದರು.
ಯು.ಎಸ್. ಕಮ್ಯುನಿಕೇಷನ್ಸ್ ಸಹಯೋಗದಲ್ಲಿ ದೇಶಪಾಂಡೆ ಫೌಂಡೇಷನ್ ಹುಬ್ಬಳ್ಳಿ ಪ್ರಾಯೋಜಕತ್ವದಲ್ಲಿ ನಗರದ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ಕೃಷಿ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಉಪಯೋಗಿಸಿಕೊಂಡು ಕೃಷಿಯಲ್ಲಿ ಬೆಳೆಗೆ ಎಷ್ಟು ಪ್ರಮಾಣದ ನೀರು ಬೇಕೋ ಅಷ್ಟು ಮಾತ್ರ ಬಳಕೆ ಮಾಡಲು ಸಾಧ್ಯವಿದೆ. ಜೊತೆಗೆ ಔಷಧಿ ಅಥವಾ ರಸಗೊಬ್ಬರದ ಪ್ರಮಾಣವನ್ನು ಅಗತ್ಯಕ್ಕೆ ತಕ್ಕಷ್ಟು ಬಳಕೆ ಮಾಡಲ ಸಾಧ್ಯವಿದೆ ಎಂದು ಹೇಳಿದರು.
ಅತ್ಯುತ್ತಮ ಕೃಷಿ ತಾಂತ್ರಿಕತೆಗಳಲ್ಲಿ ಡ್ರೋಣ್ ಬಳಕೆಯೂ ಒಂದಾಗಿದೆ. ಮ್ಯಾಪಿಂಗ್ ಮಾಡಿಕೊಂಡ ಕೃಷಿ ಪ್ರದೇಶಕ್ಕೆ ಡ್ರೋಣ್ ಮೂಲಕ ಔಷಧಿ ಸಿಂಪರಣೆ ಮಾಡಬಹುದಾಗಿದೆ. ಈ ಪದ್ಧತಿ ಈಗಾಗಲೇ ಪ್ರಚಲಿತವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದರು.
ಪ್ರಕೃತಿ ಕೊಟ್ಟ ಅಮೂಲ್ಯ ನೀರನ್ನು ಮಿತವಾಗಿ, ಕಾಳಜಿಯಿಂದ ಬಳಕೆ ಮಾಡ ದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೀಡಾ ಗಬೇಕಾಗುತ್ತದೆ. ಹೆಚ್ಚಿನ ರಸಗೊಬ್ಬರದ ಬಳಕೆಯಿಂದಾಗಿ ಮಣ್ಣಿನಲ್ಲಿ ಹೂತಿಟ್ಟ ಶವಗಳೂ ಕೊಳೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭೂಮಿಯ ತಾಪಮಾನ ಹೆಚ್ಚಾಗುತ್ತಿರುವ ಪರಿಣಾಮ ಒಂದು ಕಡೆ ಹೆಚ್ಚು ಮಳೆ, ಮತ್ತೊಂದು ಕಡೆ ಭೀಕರ ಬರಗಾಲ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃಷಿ ಸಂಬಂಧಿತ ಉಪಕರಣಗಳಾದ ಪಂಪ್ ಸೆಟ್, ಸೋಲಾರ್, ಟ್ರ್ಯಾಕ್ಟರ್ಗಳು, ವಿವಿಧ ಬಗೆಯ ತರಕಾರಿ ಬೀಜಗಳು, ಬೇಲಿಗೆ ಬಳಸಲ್ಪಡುವ ತಂತಿಗಳು, ಕೃಷಿ ಯಂತ್ರೋಪಕರಣಗಳು ಸೇರಿದಂತೆ ಸಾವಯವ ಆಹಾರ ಪದಾರ್ಥಗಳು, ಸ್ವ ಸಹಾಯ ಸಂಘಗಳ ಆಹಾರೋತ್ಪನ್ನಗಳು, ಫರ್ನೀಚರ್ಗಳ ಮಳಿಗೆಗಳು ಕೃಷಿ ಮೇಳದಲ್ಲಿದ್ದವು. ಕುರಿ ಹಾಗೂ ಕುರಿ ಉತ್ಪನ್ನಗಳ ಫಾರಂನವರೂ ಸಹ ಮೇಳದಲ್ಲಿ ಭಾಗವಹಿಸಿದ್ದರು. ಐದಾರು ಟಗರುಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ನಗರದಲ್ಲಿ ನಡೆಯಲಿರುವ ದುರ್ಗಾಂಬಿಕಾ ಜಾತ್ರೆ ಹಿನ್ನೆಲೆಯಲ್ಲಿ ಮೇಳಕ್ಕೆ ಬಂದವರು ಕುರಿ ಉತ್ಪನ್ನಗಳತ್ತ ಹೆಚ್ಚಿನ ಗಮನ ನೀಡುತ್ತಿದ್ದುದು ಕಂಡು ಬಂತು.
ಮನುಷ್ಯನ ದಿನದ ನೀರಿನ ಬಳಕೆ 4750 ಲೀಟರ್ !
ಮನುಷ್ಯನೊಬ್ಬ ದಿನವೊಂದಕ್ಕೆ 4750 ಲೀಟರ್ ಬಳಕೆ ಮಾಡುತ್ತಾನೆ. ಸಾಮಾನ್ಯವಾಗಿ ನಾವು ಕಣ್ಣಿಗೆ ಕಾಣುವ ನೀರಿನ ಬಳಕೆ ಪ್ರಮಾಣ ಮಾತ್ರ ಹೇಳುತ್ತೇವೆ. ಆದರೆ ನಾವು ಉಡುವ ಬಟ್ಟೆ, ಬಳಸುವ ಕಾಗದ, ಊಟ ಮಾಡುವ ಆಹಾರ ಸೇರಿದಂತೆ ಕಣ್ಣಿಗೆ ಕಾಣದ ನೀರಿನ ಮೌಲ್ಯವನ್ನೂ ಲೆಕ್ಕ ಹಾಕಿದರೆ ಬದುಕಿನ ವಿವಿಧ ಹಂತಗಳಲ್ಲಿ ನಾವು ಬಳಸುವ ನೀರಿನ ಪ್ರಮಾಣ ಕೋಟಿ ಲೀಟರ್ಗೂ ಹೆಚ್ಚಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಹೇಳಿದರು.
ರಾಜ್ಯಮಟ್ಟದ ಕೃಷಿ ಪ್ರಶಸ್ತಿಗೆ 19 ರೈತರು ನೋಂದಣಿ
ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿನ 19 ಜನ ರೈತರು ರಾಜ್ಯ ಮಟ್ಟದ ಕೃಷಿ ಪ್ರಶಸ್ತಿಗೆ ಹೆಸರು ನೋಂದಾಯಿಸಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಹೇಳಿದರು.
ಜಿಲ್ಲೆಯ ರೈತರೊಬ್ಬರು ಒಂದು ಹೆಕ್ಟೇರ್ಗೆ 107.61 ಕ್ವಿಂಟಾಲ್ ಭತ್ತ ಬೆಳೆದು ರಾಜ್ಯಮಟ್ಟ ದಲ್ಲಿ ಮೂರನೇ ಬಹುಮಾನ ಪಡೆದು, ಸಚಿವರಿಂದ ಸನ್ಮಾನ ಸ್ವೀಕರಿಸಿದ್ದಾರೆ ಎಂದು ಹೇಳಿದರು. ಜಿಲ್ಲೆಯಲ್ಲಿ 1.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗಿದ್ದು, ರೈತರು 7 ಲಕ್ಷ ಟನ್ ಇಳುವರಿ ಪಡೆದಿದ್ದಾರೆ. ಅಂತರ ಬೆಳೆಯಾಗಿ ತೊಗರಿ ಬೆಳೆಯುವಂತೆ ನೀಡಲಾಗಿದ್ದ ನಮ್ಮ ಕರೆಗೆ ಸುಮಾರು 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿತ್ತು. ಎಕರೆಗೆ 10.12 ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ ಎಂದರು.
ಭತ್ತದ ಬದುವಿನ ಮೇಲೆ ಉದ್ದು ಬೆಳೆ: ಜಿಲ್ಲೆಯಲ್ಲಿ 1.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಭತ್ತದ ಬದುವಿನ ಮೇಲೆ ಪ್ರಾಯೋಗಿಕವಾಗಿ ಉದ್ದು ಬೆಳೆಯಲು ಸಲಹೆ ನೀಡಲಾಗಿತ್ತು. ಈ ಪ್ರಯತ್ನದಲ್ಲಿ ಎಕರೆಗೆ 50 ರಿಂದ 100 ಕೆ.ಜಿ.ವರೆಗೆ ಉದ್ದು ಬೆಳೆದಿದ್ದಾರೆ ಎಂದು ಚಿಂತಾಲ್ ವಿವರಿಸಿದರು.
ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಮಾತನಾಡುತ್ತಾ, ಒಂದೇ ಸೂರಿನಲ್ಲಿ ಆಧುನಿಕ ಉಪಕರಣಗಳು ಸಿಗುವುದು ಹಾಗೂ ರೈತರ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಅನುಕೂಲವಾಗುವುದ ರಿಂದ ಕೃಷಿ ಮೇಳ ರೈತರಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ವಿವಿಧ ಕಂಪನಿಗಳ ಮಾಲೀಕರು ರೈತರಿಗೆ ಉಪಕರಣಗಳನ್ನು ಕಡಿಮೆ ಬೆಲೆಗೆ ನೀಡಲು ಪ್ರಯತ್ನಿಸಬೇಕು. ಖರೀದಿ ನಂತರ ಉಪಕರಣಗಳ ಬಳಕೆ ಕುರಿತು ತರಬೇತಿ ನೀಡಬೇಕು ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ಮಾತನಾಡುತ್ತಾ, ಇತ್ತೀಚೆಗೆ ಅಡಿಕೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಡಿಕೆ ತೋಟದಲ್ಲಿ ಅಂತರ ಬೆಳೆಗಳನ್ನು ಬೆಳೆಯಬೇಕು. ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಂಡರೆ ಸುಸ್ಥಿರ ಆದಾಯ ಗಳಿಸಬಹುದು. ಅಲ್ಲದೇ ಹನಿ ನೀರಾವರಿ, ತುಂತುರು ನೀರಾವರಿ ಪದ್ಧತಿ ಬಳಕೆಗೆ ಹೆಚ್ಚಿನ ಒತ್ತು ನೀಡುವಂತೆ ರೈತರಿಗೆ ಸಲಹೆ ನೀಡಿದರು.
ಎಪಿಎಂಸಿ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ರೈತ ಮುಖಂಡ ತೇಜಸ್ವಿ ಪಟೇಲ್, ಎನ್.ಜಿ. ಪುಟ್ಟಸ್ವಾಮಿ, ಕೆ.ಆರ್. ಹುಲ್ಲುನಾಚೇಗೌಡ, ಲೋಕಿಕೆರೆ ನಾಗರಾಜ್, ಈರಣ್ಣ ರೊಟ್ಟಿ, ಉಮಾಪತಿ ಮತ್ತಿತರರು ಉಪಸ್ಥಿತರಿದ್ದರು.