ಖಾತ್ರಿ ಹಣ ದುರುಪಯೋಗ: ಜಿಲ್ಲೆಯಲ್ಲಿ 26 ಕೋಟಿ ರೂ. ವಸೂಲಿಗೆ ಕ್ರಮ

ಖಾತ್ರಿ ಹಣ ದುರುಪಯೋಗ: ಜಿಲ್ಲೆಯಲ್ಲಿ 26 ಕೋಟಿ ರೂ. ವಸೂಲಿಗೆ ಕ್ರಮ - Janathavani

ದಾವಣಗೆರೆ: ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿನ ವೈಫಲ್ಯ ಹಾಗೂ ಹಲವಾರು ಪಂಚಾಯಿತಿಗಳಲ್ಲಿ ಆಗಿರುವ ಹಣ ದುರುಪಯೋಗದ ಬಗ್ಗೆ ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ಗುರುತಿಸಲಾಗಿರುವ 2013-14ನೇ ಸಾಲಿನಿಂದ 2018-19 ನೇ ಸಾಲಿನ ವರೆಗೆ ಸುಮಾರು 26 ಕೋಟಿ ರೂ. ದುರುಪಯೋಗವಾಗಿದೆ ಎಂಬ ವರದಿಯ ಆಧಾರದ ಮೇಲೆ, ಹಣ ದುರುಪಯೋಗಕ್ಕೆ ಕಾರಣರಾದವರಿಂದ ವಸೂಲಾತಿ ಮಾಡಬೇಕಾದ ಮೊತ್ತದ ಪ್ರಮಾಣವನ್ನು ನಿರ್ಧರಿಸುವುದಕ್ಕೆ ಸರ್ಕಾರ ಈಗಾಗಲೇ ಮಾನದಂಡ ನಿಗದಿಪಡಿಸಿ 2020 ಜನವರಿ 4ರಂದು ಸುತ್ತೋಲೆ ಹೊರಡಿಸಿದೆ.

ಜಿಲ್ಲೆಯ ದಾವಣಗೆರೆ, ಚನ್ನಗಿರಿ, ನ್ಯಾಮತಿ, ಹೊನ್ನಾಳಿ, ಹರಿಹರ ಮತ್ತು ಜಗಳೂರು ಸೇರಿದಂತೆ ಆರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ  ಸುಮಾರು 26.63 ಕೋಟಿ ರೂ. ವಸೂಲಾತಿಗಾಗಿ ಸಾಮಾಜಿಕ ಲೆಕ್ಕ ಪರಿಶೋಧನೆ ವರದಿಯಲ್ಲಿ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಂಟಿ ನಿರ್ದೇಶಕ (ಆಡಳಿತ) ಅರುಣ್ ಕುಮಾರ್ ಹಡಗಲಿ ಅವರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಈ ಸುತ್ತೋಲೆಯ ಬಗ್ಗೆ ಕ್ರಮ ಕೈಗೊಳ್ಳಲು ತಾಲ್ಲೂಕುವಾರು ಈಗಾಗಲೇ ಸಭೆಗಳನ್ನು ನಡೆಸಿದ್ದಾರೆ.

 ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿಯು ಗ್ರಾಮ  ಪಂಚಾಯ್ತಿ ವಾರು ದುರುಪಯೋಗವಾಗಿರುವ ಹಣ ಎಷ್ಟು? ಯಾರು, ಯಾರಿಂದ ಎಷ್ಟು ಹಣ ವಸೂಲಾತಿ ಮಾಡಬೇಕು ಎಂಬುದರ ಬಗ್ಗೆ ಈಗಾಗಲೇ ಲೆಕ್ಕಾಚಾರ ಹಾಕುವ ಕಾರ್ಯ ಆರಂಭವಾಗಿದೆ. ಕೆಲವೇ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ಆರು ತಾಲ್ಲೂಕಿನ ಇಓಗಳು ಅಂತಿಮ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ತಪ್ಪಿತಸ್ಥ ರಿಂದ ವಸೂಲಿ ಮಾಡಲು ಸರ್ಕಾರ ನಿಗದಿಪಡಿಸಿರುವ ಮಾನದಂಡಗಳು:  1) ಕಾಮಗಾರಿ ನಿರ್ವಹಣೆ ಹಣ ಪಾವತಿ ಯಾಗಿದ್ದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂ ಅಧ್ಯಕ್ಷರಿಂದ ತಲಾ ಶೇಕಡ 20 ಪರ್ಸೆಂಟ್, ಚೆಕ್ ಮೆಜರ್‌ಮೆಂಟ್ ಮಾಡಿದವರು ಎಂಬಿ ಬುಕ್ ದಾಖಲು ಮಾಡಿದವರಿಂದ ತಲಾ ಶೇ.30 ಪರ್ಸೆಂಟ್ ಹಣ ವಸೂಲಾತಿ ಮಾಡಬೇಕಾಗಿದೆ.

2) ಭೌತಿಕ ಕಾಮಗಾರಿಗಿಂತ ಹೆಚ್ಚುವರಿ ಹಣ ಪಾವತಿಯಾಗಿದ್ದರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತ್ ಅಧ್ಯಕ್ಷರು ತಲಾ ಶೇಕಡ 40ರಷ್ಟು ಮೊತ್ತವನ್ನು ವಸೂಲಿ ಮಾಡಬೇಕಾಗಿದೆ. 

3) ಅಳತೆಗಿಂತ ಹೆಚ್ಚುವರಿ ಎಂಬಿ ದಾಖಲಾದ ಕಾಮಗಾರಿಗಳಲ್ಲಿ ಇಂಜಿನಿಯರ್ ಶೇಕಡ 70ರಷ್ಟು, ಚೆಕ್ ಮೆಜರ್‌ಮೆಂಟ್ ಮಾಡಿದವರಿಂದ ಶೇಕಡ 30ರಷ್ಟು ಹಣ ವಸೂಲು ಮಾಡಲಾಗುವುದು.

4) ಬೇರೆ ಯೋಜನೆ ಅಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳಿಗೆ ನರೇಗಾ ಯೋಜನೆ ಅಡಿ ಹಣ ಪಾವತಿ ಮಾಡಿದ ಕಾಮಗಾರಿಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು ಹಾಗೂ ಎಂಬಿ ದಾಖಲಿಸಿದವರಿಂದ ತಲಾ ಶೇ.33ರಷ್ಟು ಹಣ ವಸೂಲು ಮಾಡಲಾಗುವುದು.

5) ಸತ್ತವರ ಮತ್ತು 18 ವರ್ಷದೊಳಗಿನ ವಿದ್ಯಾರ್ಥಿಗಳ ಹಾಗೂ ಅನರ್ಹರಿಗೆ ಕೂಲಿ ಪಾವತಿ ಮಾಡಿದ ಮೊತ್ತದಲ್ಲಿ ಗಣಕ ಯಂತ್ರ ನಿರ್ವಾಹಕ ಬಟವಾಡೆ ಅಧಿಕಾರಿ ಹಾಗೂ ಹಾಜರಾತಿ ಪಡೆದವರಿಂದ ಹಣ ವಸೂಲಾತಿ ಮಾಡಲಾಗುವುದು.

6) ಗೈರು ಹಾಜರಾದ ಕೂಲಿ ಕಾರ್ಮಿಕರಿಗೆ ಕೂಲಿ ಪಾವತಿಸಿದ ಪಕರಣಗಳಲ್ಲಿ ಹಾಜರಾತಿ ಪಡೆದವರಿಂದ ಶೇ.100ರಷ್ಟು ವಸೂಲಾತಿ ಮಾಡಲಾಗುವುದು.

 ಸಾಮಗ್ರಿ ವೆಚ್ಚದಲ್ಲಿ ಅಗತ್ಯವಿರದ ಸಾಮಗ್ರಿ ಖರೀದಿಗೆ ಎರಡು ಬಾರಿ ಪಾವತಿ ಆಗಿರುವ ಸಾಮಗ್ರಿ ವೆಚ್ಚ ಆಗಿರುವ ಪ್ರಕರಣಗಳಲ್ಲಿ ಕಚೇರಿ ಮುಖ್ಯಸ್ಥರು ಶೇ.50, ಬಟವಾಡೆ ಅಧಿಕಾರಿ ಶೇ. 30 ಲೆಕ್ಕ ಸಹಾಯಕರು ಶೇಕಡ 20 ರಷ್ಟು ಹಣ ವಸೂಲಿ ಮಾಡಲು ಸರಕಾರದ ಸುತ್ತೋಲೆಯಲ್ಲಿ ಸುದೀರ್ಘ ಹಾಗೂ ವಿವರವಾದ ಮಾನದಂಡಗಳನ್ನು ಗುರುತಿಸಲಾಗಿದೆ.

 ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯಲ್ಲಿ ವಿವಿಧ ಮೂಲಗಳಿಂದ ವಸೂಲಾತಿ ಮತ್ತು ಆಕ್ಷೇಪಣೆಗೆ ಸೂಚಿಸಿರುವಂತೆ ಹಣ ಪಾವತಿಗೆ ಕಾರಣರಾದ ಅಧಿಕಾರಿ, ಸಿಬ್ಬಂದಿಗಳು ಮತ್ತು ಹೊರಗುತ್ತಿಗೆ ನೌಕರರು ಹಾಗೂ ಚುನಾಯಿತ ಪ್ರತಿನಿಧಿಗಳಿಂದ ಅವರುಗಳು ಜವಾಬ್ದಾರರಾಗಿರುವ ಮಟ್ಟಿಗೆ ಸುತ್ತೋಲೆಯಲ್ಲಿ ನಿಗದಿಪಡಿಸಿರುವಂತೆ ಶೇಕಡವಾರು ಪ್ರಮಾಣದಲ್ಲಿ ಹಣ ವಸೂಲಾತಿ ಮಾಡಿ ಜಿಪಂ ಸಿಇಓ ಅವರು ಸರ್ಕಾರದ ನರೇಗಾ ಯೋಜನೆ ಖಾತೆಗೆ ಜಮಾ ಮಾಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದರೆ ಯಾವುದೇ ಕಾಲಮಿತಿ ನಿಗಧಿಪಡಿಸಿಲ್ಲ.

2013-14 ರಿಂದ 2019-20 ನೇ ಸಾಲಿನ ವರೆಗೆ ಸಾಮಾಜಿಕ ಲೆಕ್ಕ ಪರಿಶೋಧನೆಯಲ್ಲಿ ಕಂಡುಬಂದ ಆಕ್ಷೇಪಣೆ ಮತ್ತು ವಸೂಲಾತಿ ಮಾಹಿತಿ: 

ಜಗಳೂರು ತಾಲ್ಲೂಕು 22 ಗ್ರಾಮ ಪಂಚಾಯಿತಿ ಗಳಿಂದ 23.4 7.ಕೋಟಿ ರೂ ವಸೂಲಾತಿಗೆ ಸೂಚಿಸಲಾದ ಮೊತ್ತ.

22 ಗ್ರಾಮ ಪಂಚಾಯತಿಗಳಿಂದ 14.56 ಕೋಟಿ ರೂ. ಆಕ್ಷೇಪಣೆಗೆ ಸೂಚಿಸಿದ ಮೊತ್ತ.

ಈಗಾಗಲೇ  ಜಗಳೂರು ತಾಪಂ ಇಓ ಅಧ್ಯಕ್ಷತೆಯ ತಾಲ್ಲೂಕು ಸಮಿತಿ ತನಿಖೆ ಆರಂಭಿಸಿದ್ದು ಸುಮಾರು 12 ಲಕ್ಷ ರೂ. ವಸೂಲಾತಿ ಮಾಡಿ ಸರ್ಕಾರಕ್ಕೆ ಜಮಾ ಮಾಡಿದೆ ಎಂದು ತಿಳಿದುಬಂದಿದೆ.

ಲೆಕ್ಕಪರಿಶೋಧನಾ ವರದಿಯಲ್ಲಿನ ಆಕ್ಷೇಪಣೆ ಮೊತ್ತದಲ್ಲಿ ಅನುಪಾಲನಾ ವರದಿ ಮೂಲಕ ಸುಮಾರು 5.02 ಕೋಟಿ ತಿರುವಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.


– ಬಿ.ಪಿ.ಸುಭಾನ್

error: Content is protected !!