ನಗರದಲ್ಲಿ ನಾಳೆ ಲಯನ್ಸ್ ಪ್ರಾಂತೀಯ ಸಮ್ಮೇಳನ `ಪರಿವರ್ತನೆ’

ನಗರದಲ್ಲಿ ನಾಳೆ ಲಯನ್ಸ್ ಪ್ರಾಂತೀಯ ಸಮ್ಮೇಳನ `ಪರಿವರ್ತನೆ' - Janathavaniದಾವಣಗೆರೆ,ಫೆ.18- ಸಾಮಾಜಿಕ ಸೇವಾ ಚಟುವಟಿಕಗೆಳಿಗೆ ಮತ್ತೊಂದು ಹೆಸರಿನಂತಿರುವ ಲಯನ್ಸ್ ಸಂಸ್ಥೆಯ ಜಿಲ್ಲೆ 317 ಸಿ ಪ್ರಾಂತ್ಯ 9ರ `ಪ್ರಾಂತೀಯ ಸಮ್ಮೇಳನ – ಪರಿವರ್ತನೆ – 2021-22′ ಅನ್ನು ನಾಡಿದ್ದು ದಿನಾಂಕ 20 ರ ಭಾನುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಉಡುಪಿ, ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನೊಳಗೊಂಡ  ಜಿಲ್ಲೆ ಲಯನ್ಸ್ 317 ಸಿ ಯಲ್ಲಿರುವ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿರುವ ದಾವಣ ಗೆರೆ ಲಯನ್ಸ್ ಕ್ಲಬ್ ಸೇರಿದಂತೆ, 18 ಲಯನ್ಸ್ ಕ್ಲಬ್‌ಗಳನ್ನೊಳಗೊಂಡಿರುವ ಪ್ರಾಂತೀಯ `ಪರಿವರ್ತನೆ – 22′ ಸಮ್ಮೇಳನ ಇದಾಗಿದೆ.

ಸಮ್ಮೇಳನದ ಛೇರ್ಮನ್ ಅಜ್ಜಂಪುರ ಶೆಟ್ರು ಮೃತ್ಯುಂಜಯ ಅವರು ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ದಾವಣಗೆರೆ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ನಾಳೆ ಭಾನುವಾರ ಬೆಳಿಗ್ಗೆ 10 ಗಂಟೆಗೆ ಲಯನ್ಸ್ ಭವನದಲ್ಲಿ ಲಯನ್ಸ್ ಪ್ರಾಂತ್ಯ – 9ರ ಪ್ರಾಂತೀಯ ಅಧ್ಯಕ್ಷ ಇ.ಎಂ. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಈ ಸಮ್ಮೇಳನ ಆಯೋಜನೆಗೊಂಡಿದೆ.

ಲಯನ್ಸ್ ಪ್ರಾಂತ್ಯ – 9ರ ವ್ಯಾಪ್ತಿಯ ಎಲ್ಲಾ 18 ಕ್ಲಬ್‌ಗಳಿಂದ 36 ಜನರು ಸೇರಿದಂತೆ, ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ 50 ಸಾಧಕರಿಗೆ `ದೇವನಗರಿ ಸಿರಿ’ ಬಿರುದು ಪ್ರದಾನದೊಂದಿಗೆ ಸನ್ಮಾನಿಸಿ, ಗೌರವಿಸುವುದು ಸಮ್ಮೇಳನದ ವಿಶೇಷತೆಗಳಲ್ಲೊಂದಾಗಿದೆ.

ಅಲ್ಲದೇ, ಪ್ರಾಂತೀಯ ಅಧ್ಯಕ್ಷ ಇ.ಎಂ. ಮಂಜುನಾಥ ಅವರು ಹೊಂದಿರುವ `ಪರೋಪಕಾರಾರ್ಥಂ ಇದಂ ಶರೀರಂ’ ಧ್ಯೇಯ ವಾಕ್ಯದಂತೆ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಬಡ ಮಕ್ಕಳಿಗೆ ಸೈಕಲ್, ಮಹಿಳೆಯರಿಗೆ ಬಟ್ಟೆ, ಶ್ರವಣ ಯಂತ್ರ, ಗೋವುಗಳಿಗೆ ಹುಲ್ಲು, ಮಹಿಳೆಯರಿಗೆ ಹೊಲಿಗೆ ಯಂತ್ರ, ವಿಶೇಷ ಚೇತನ ಮಕ್ಕಳಿಗೆ ಸಿಹಿ ವಿತರಣೆ ಸೇರಿದಂತೆ, ಸುಮಾರು 2 ಲಕ್ಷ ರೂ.ಗಳ ವೆಚ್ಚದಲ್ಲಿ ವಿವಿಧ ವಸ್ತುಗಳನ್ನು ದಾನಿಗಳ ನೆರವಿನಿಂದ ವಿತರಿಸುತ್ತಿರುವುದು ಸಮ್ಮೇಳನದ ವೈಶಿಷ್ಟ್ಯ.

 

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸ್ಥಳೀಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಪ್ರಾಂತೀಯ ಅಧ್ಯಕ್ಷ ಇ.ಎಂ. ಮಂಜುನಾಥ ಅವರ ಮಾತೃಶ್ರೀ ಶ್ರೀಮತಿ ಶಕುಂತಲಾ ಮೋಹನ್ ಏಕಬೋಟೆ ಅವರು ಜ್ಯೋತಿ ಬೆಳಗಿಸುವುದರೊಂದಿಗೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

ಪ್ರಾಂತೀಯ ಸಮ್ಮೇಳನ `ಪರಿವರ್ತನೆ – 2022′ ಸವಿ ನೆನಪಿಗಾಗಿ ಪ್ರಕಟಿಸಿರುವ ಸ್ಮರಣ ಸಂಚಿಕೆಯನ್ನು `ಜನತಾವಾಣಿ’ಯ ಶ್ರೀಮತಿ ನೀತಾ ವಿಕಾಸ್ ಅವರು ಬಿಡುಗಡೆ ಮಾಡಲಿದ್ದಾರೆ. ಲಯನ್ಸ್ ಮಲ್ಟಿಪಲ್ ಜಿಲ್ಲಾ ತರಬೇತುದಾರರಾದ ರವಿ ಆರ್. ಹೆಗಡೆ ಅವರು ಮುಖ್ಯ ಅತಿಥಿಯಾಗಿ ಮತ್ತು ಲಯನ್ಸ್ ಜಿಲ್ಲೆ 317 ಸಿ ಪ್ರಥಮ ಉಪ ರಾಜ್ಯಪಾಲ ಎಂ.ಕೆ. ಭಟ್ ಅವರು ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ರಾಜಸ್ಥಾನದ ಅಬು ಪರ್ವತದಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದ ಪ್ರಧಾನ ಕೇಂದ್ರದ ಧಾರ್ಮಿಕ ವಿಭಾಗದ ಸಂಪರ್ಕಾಧಿಕಾರಿಯೂ ಆಗಿರುವ ಹಿರಿಯ ಧಾರ್ಮಿಕ ಚಿಂತಕ ರಾಜಯೋಗಿ ಬ್ರಹ್ಮಾಕುಮಾರ ರಾಮನಾಥ್ ಜೀ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ `ಜನತಾವಾಣಿ’ ಸಂಪಾದಕ ಎಂ.ಎಸ್. ವಿಕಾಸ್ ಮತ್ತು ಶ್ರೀಮತಿ ನೀತಾ ವಿಕಾಸ್ ದಂಪತಿಯನ್ನು `ದೇವನಗರಿಯ ಧೀಮಂತ’ ಬಿರುದು ಪ್ರದಾನದೊಂದಿಗೆ ಸನ್ಮಾನಿಸಿ, ಗೌರವಿಸಲಾಗುತ್ತದೆ.

ಜೊತೆಗೆ, ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯ ಡಾ. ಬಿ.ಎಸ್. ನಾಗಪ್ರಕಾಶ್ ಮತ್ತು ಶ್ರೀಮತಿ ಪದ್ಮಾ  ದಂಪತಿಯನ್ನು `ದೇವನಗರಿಯ ಧೀಮಂತ’ ಬಿರುದು ಪ್ರದಾನದೊಂದಿಗೆ ಸನ್ಮಾನಿಸಿ, ಗೌರವಿಸಲಾಗುತ್ತದೆ.

ಜಿಲ್ಲಾ ಲಯನ್ಸ್ ವಿಶ್ರಾಂತ ರಾಜ್ಯಪಾಲರುಗಳಾದ ಹಿರಿಯ ವೈದ್ಯ ಡಾ. ಜಿ. ಶಿವಲಿಂಗಪ್ಪ, ಮತ್ತೋರ್ವ ಹಿರಿಯ ವೈದ್ಯ ಮಲೇಬೆನ್ನೂರಿನ ಡಾ. ಟಿ. ಬಸವರಾಜ್, ಹೆಚ್.ಎನ್. ಶಿವಕುಮಾರ್, ಎ.ಆರ್. ಉಜ್ಜನಪ್ಪ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿರುವರು.

ಸಮ್ಮೇಳನದ ಕಾರ್ಯದರ್ಶಿ ಬೆಳ್ಳೂಡಿ ಶಿವಕುಮಾರ್, ಖಜಾಂಚಿ ಎನ್.ಸಿ. ಬಸವರಾಜ್, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಓಂಕಾರಪ್ಪ, ಕಾರ್ಯದರ್ಶಿ ಕೋರಿ ಶಿವಕುಮಾರ್, ಖಜಾಂಚಿ ಕಣವಿ ನಟರಾಜ್, ಸಹ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ್ ಮತ್ತು ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!