ಮಲೇಬೆನ್ನೂರು, ಫೆ. 17- ಹಿಜಾಬ್ಗೆ ಅವಕಾಶ ನೀಡದಿದ್ದರೆ ನಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವುದಿಲ್ಲ ಎಂಬ ಅಭಿಪ್ರಾಯವನ್ನು ಪೋಷಕರು ವ್ಯಕ್ತಪಡಿಸಿದ ಘಟನೆ ಗುರುವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರೆದಿದ್ದ ಪೋಷಕರ ಸಭೆಯಲ್ಲಿ ನಡೆದಿದೆ.
ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಹೈಕೋರ್ಟ್ ನೀಡಿರುವ ಸೂಚನೆ ಮತ್ತು ಸರ್ಕಾರದ ಆದೇಶವನ್ನು ಸಭೆಯ ಆರಂಭದಲ್ಲಿ ಪೋಷಕರಿಗೆ ಪ್ರಾಚಾರ್ಯ ರಂಗಪ್ಪ ತಿಳಿಸಿದರು.
ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಹಿಜಾಬ್ ಅಥವಾ ಯಾವುದೇ ತರಹದ ಶಾಲು ಧರಿಸಲು ಅವಕಾಶವಿಲ್ಲ ಎಂಬ ಸ್ಪಷ್ಟ ಮಾಹಿತಿಯನ್ನು ನೋಡಲ್ ಅಧಿಕಾರಿಗಳೂ ಆದ ಯೋಜನಾ ನಿರ್ದೇಶಕರಾದ ಶ್ರೀಮತಿ ನಜ್ಮಾ ಅವರು ಪೋಷಕರಿಗೆ ಮನವೊಲಿಕೆ ಮಾಡಿಕೊಟ್ಟರು.
ಆರಂಭದಲ್ಲಿ ಅಧಿಕಾರಿಗಳ ಮನವೊಲಿಕೆಗೆ ಶೇ. 80ರಷ್ಟು ಪೋಷಕರು ಒಪ್ಪಿಗೆ ಕೊಟ್ಟಿದ್ದರು. ಸಭೆಯ ಕೊನೆಯಲ್ಲಿ ಹಿಜಾಬ್ ಅಥವಾ ವೇಲ್ ಹಾಕಿಕೊಳ್ಳಲು ಅವಕಾಶ ನೀಡದಿದ್ದರೆ ನಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವುದಿಲ್ಲ ಎಂಬ ಅಭಿಪ್ರಾಯ ತಿಳಿಸಿ ಸಭೆಯಿಂದ ಹೊರಟು ಹೋದರು.
ಪೋಷಕರೊಂದಿಗೆ ಕೆಲವು ವಿದ್ಯಾರ್ಥಿನಿಯರು ಮನೆಗೆ ವಾಪಸ್ಸಾದರು.
ಪೋಷಕರ ಈ ಅಭಿಪ್ರಾಯದಿಂದ ಸುಮಾರು ಒಂದು ತಾಸು ಮನವೊಲಿಸಿದ ಅಧಿಕಾರಿಗಳೂ ಬೇಸರಗೊಂಡರು.
ಸೋಮವಾರದಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳು ಇರುವುದರಿಂದ ಪರೀಕ್ಷೆಯ ಅನುಮತಿ ಪಡೆದ 13 ವಿದ್ಯಾರ್ಥಿನಿಯರೂ ಕೂಡಾ ತರಗತಿಗಳಿಗೆ ಹೋಗದೆ ಮನೆಗೆ ತೆರಳಿದರು.
ಹಿಜಾಬ್ ಧರಿಸದ 4 ವಿದ್ಯಾರ್ಥಿನಿಯರು ಮಾತ್ರ ತರಗತಿಗೆ ಹಾಜರಾಗಿದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 363 ವಿದ್ಯಾರ್ಥಿಗಳಿದ್ದು, 156 ವಿದ್ಯಾರ್ಥಿನಿಯರ ಪೈಕಿ 37 ಅಲ್ಪ ಸಂಖ್ಯಾತ ವಿದ್ಯಾರ್ಥಿನಿಯರಿದ್ದಾರೆ.
37 ವಿದ್ಯಾರ್ಥಿನಿಯರಲ್ಲಿ ಬುಧವಾರ 15 ವಿದ್ಯಾರ್ಥಿನಿಯರು ಮಾತ್ರ ಕಾಲೇಜಿಗೆ ಬಂದು ಅದರಲ್ಲಿ 10 ವಿದ್ಯಾರ್ಥಿನಿಯರು ಹಿಜಾಬ್ ತೆಗೆಯುವುದಿಲ್ಲ ಎಂದು ಹೇಳಿದರು. 5 ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ತೆರವು ಮಾಡಿ ತರಗತಿಗೆ ಹಾಜರಾಗಿದ್ದರು.
ಗುರುವಾರ 21 ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿದ್ದರು. ಇದರಲ್ಲಿ 4 ವಿದ್ಯಾರ್ಥಿನಿಯರು ಮಾತ್ರ ತರಗತಿಗೆ ಹಾಜರಾಗಿದ್ದರು. ಉಳಿದ 17 ವಿದ್ಯಾರ್ಥಿನಿಯರು ಹಿಜಾಬ್ ತೆರವು ಮಾಡದೇ ಮನೆಗೆ ವಾಪಸ್ಸಾದರು.
ಇನ್ನೋರ್ವ ನೋಡಲ್ ಅಧಿಕಾರಿಗಳಾದ ಜಿಲ್ಲಾ ಬಿಸಿಎಂ ಆಫೀಸರ್ ಅಮಿತ್ ಬಿದರಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮೀರ್ ಅಜಾಂ, ಸದಸ್ಯರಾದ ಹಾಲಿವಾಣದ ರೇವಣಸಿದ್ದಪ್ಪ, ಕೊಕ್ಕನೂರಿನ ಚಂದ್ರಪ್ಪ, ಉಪನ್ಯಾಸಕ ತಿಪ್ಪೇಸ್ವಾಮಿ, ಪಿಎಸ್ಐ ರವಿ ಕುಮಾರ ಸೇರಿದಂತೆ 20ಕ್ಕೂ ಹೆಚ್ಚು ಪೋಷಕರು ಸಭೆಯಲ್ಲಿದ್ದರು.