ದಾವಣಗೆರೆ, ಫೆ.17- ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ ಭಾವಚಿತ್ರ ತೆರವುಗೊಳಿಸಿದರೆ ಮಾತ್ರ ಧ್ವಜಾರೋಹಣ ಮಾಡುವುದಾಗಿ ಉದ್ಧಟತನದ ಹೇಳಿಕೆ ನೀಡಿದ ಸಂವಿಧಾನ ವಿರೋಧಿ ರಾಯಚೂರಿನ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಇದೇ ದಿನಾಂಕ 19 ರಂದು ಶನಿವಾರ ವಿಧಾನ ಸೌಧ- ಹೈಕೋರ್ಟ್ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಚಿಂತಕ, ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ. ರಾಮಚಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂವಿಧಾನಕ್ಕೆ ಅಪಚಾರವೆಸಗಿರುವ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ಇಡೀ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಚಳವಳಿಗಳನ್ನು ನಡೆಸಿದರೂ, ಸಂವೇದನೆ ಇಲ್ಲದ ಸರ್ಕಾರಕ್ಕೆ ದಲಿತರ ದನಿ ಕೇಳುತ್ತಿಲ್ಲ. ಸರ್ಕಾರ ಮೌನ ವಹಿಸಿರುವುದನ್ನು ನೋಡಿದರೆ ಮಲ್ಲಿಕಾರ್ಜುನ ಗೌಡರ ಪರ ಇದೆ ಎಂದುಕೊಳ್ಳಬೇಕಿದೆ ಎಂದರು.
ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿರುವ ಮಲ್ಲಿಕಾರ್ಜುನ ಗೌಡ ಅವರನ್ನು ಕೂಡಲೇ ವಜಾಗೊಳಿಸಬೇಕು, ಕಠಿಣ ಕಾನೂನು ಕ್ರಮ ಜರುಗಿಸುವಂತೆ ಪ್ರಗತಿಪರರು, ಅಂಬೇಡ್ಕರ್ ಅನುಯಾಯಿಗಳು, ವಿದ್ಯಾರ್ಥಿ ಸಂಘಟನೆಗಳು, ದಲಿತ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೈಕೋರ್ಟ್ ಸಹ ತಾರ್ಕಿಕ ಅಂತ್ಯ ಕೊಟ್ಟಿಲ್ಲ. ಕೇವಲ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಸಂವಿಧಾನ ದಿನದಂದು ಮಾತ್ರ ಅಂಬೇಡ್ಕರ್ ಭಾವಚಿತ್ರ ಇಡಲು ತೀರ್ಮಾನ ಕೈಗೊಂಡಿದೆ ಎಂದರು.
ಎಲ್ಲಾ ಹಂತದ ನ್ಯಾಯಾಲಯಗಳ ಸಭಾಂಗಣದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕುವ ಬಗ್ಗೆಯಾಗಲೀ, ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆಯಾಗಲೀ ತೀರ್ಮಾನ ಕೈಗೊಳ್ಳದಿರುವುದು ದಲಿತ ಸಮುದಾಯದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದರು. ಸಂವಿಧಾನ ವಿರೋಧಿ ಹುಮ್ನಾಬಾದ್ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಹೆಗ್ಗೆರೆ ರಂಗಪ್ಪ, ಹೊನ್ನಾಳಿಯ ಎ.ಡಿ. ಈಶ್ವರಪ್ಪ, ಕಬ್ಬಳ್ಳಿ ಮೈಲಪ್ಪ, ಅನಿಸ್ ಪಾಷ, ಕುಂದುವಾಡದ ಮಂಜುನಾಥ್, ಸಿ. ಬಸವರಾಜ್, ರಾಮಪ್ಪ, ಕತ್ತಲಗೆರೆ ತಿಪ್ಪಣ್ಣ, ಕಬ್ಬೂರು ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.