ಕಟ್ಟುನಿಟ್ಟಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಿದ್ಧರಾಗಲು ಕರೆ

ಹರಿಹರ, ಫೆ. 17- ಕಳೆದ ವರ್ಷ ಕೊರೊನ ರೋಗವು ಹೆಚ್ಚಿನ ಪ್ರಮಾಣದಲ್ಲಿ ಹರಡಿದ್ದ ಪರಿಣಾಮವಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆ  ತಕ್ಕಮಟ್ಟಿಗೆ ನಡೆಯಿತು. ಆದರೆ ಈ ಬಾರಿ ಕೊರೊನ  ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರುವುದರಿಂದ ಕಟ್ಟುನಿಟ್ಟಾಗಿ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ.ಬಿ.ಸಿ. ಸಿದ್ದಪ್ಪ ಹೇಳಿದರು.

ನಗರದ ಶ್ರೀಮತಿ ಹಾಲಮ್ಮ ಶಾಮನೂರು ಶಿವಪ್ಪ ಪ್ರೌಢಶಾಲಾ ಸಭಾಂಗಣದಲ್ಲಿ  ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತೆ ಪರೀಕ್ಷಾ ಕ್ರಮ ಹಾಗೂ ಶಿಕ್ಷಕರ ಜವಾಬ್ದಾರಿಗಳ ಕುರಿತು ಹಮ್ಮಿಕೊಂಡಿದ್ದ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲಾ ಮುಖ್ಯಶಿಕ್ಷಕರು ಸರ್ಕಾರದ ಮಾರ್ಗಸೂಚಿ ಅನ್ವಯ ಶಾಲೆಯಲ್ಲಿ ಯಾವುದೇ ರೀತಿಯ ತೊಂದರೆಗಳು ನಡೆಯದಂತೆ ಪರೀಕ್ಷಾ ಸಿದ್ದತೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪರೀಕ್ಷೆ ಸಮಯದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಬರದಂತೆ  ಮುತುವರ್ಜಿ ವಹಿಸಬೇಕು. ಸರ್ಕಾರದ ಮಾರ್ಗಸೂಚಿ ವಿಧಾನವನ್ನು ಮಕ್ಕಳ ಹಾಗೂ ಪೋಷಕರ ಗಮನಕ್ಕೆ ತರಬೇಕು. ಶಾಲೆಯ ಆವರಣದೊಳಗೆ ಅಪರಿಚಿತರು ಬರದಂತೆ ಎಚ್ಚರ ವಹಿಸಬೇಕು. ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆ ಉಲ್ಬಣವಾದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ಮತ್ತು ಮಕ್ಕಳ ಪೋಷಕರ ಗಮನಕ್ಕೆ ಆದಷ್ಟು ಬೇಗ ತರಬೇಕು ಎಂದು ಹೇಳಿದರು.  

ಈ ಸಂದರ್ಭದಲ್ಲಿ ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಯಣ್ಣ, ರಾಜ್ಯ ಸರ್ಕಾರಿ ನೌಕರರ ಸಂಘ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷ ರೇವಣಸಿದ್ದಪ್ಪ ಅಂಗಡಿ, ಶ್ರೀಮತಿ ಹಾಲಮ್ಮ ಶಾಮನೂರು ಶಿವಪ್ಪ ಪ್ರೌಢಶಾಲೆ ಮುಖ್ಯ ಶಿಕ್ಷಕ ಚನ್ನಬಸಪ್ಪ, ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಶ್ರೀನಿವಾಸ್, ಶಿಕ್ಷಣ ಸಂಯೋಜಕ ಮಂಜುನಾಥ್ ಎಸ್ ಇತರರು ಉಪಸ್ಥಿತರಿದ್ದರು.

error: Content is protected !!