ಕಾವ್ಯವೇ ಜೀವನವೆಂದು ಬದುಕಿದ ಅಗ್ರಗಣ್ಯ ಕವಿ ಕಣವಿ

ಹರಿಹರದ ಶ್ರದ್ಧಾಂಜಲಿ ಸಭೆಯಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಸ್.ಹೆಚ್.ಹೂಗಾರ್ ಆಗ್ರಹ

ಹರಿಹರ, ಫೆ.17-  ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ ಎಂದು ಖ್ಯಾತರಾದ ಹೊಸಗನ್ನಡ ಕಾವ್ಯದ ಪ್ರಮುಖ ಕವಿ ನಾಡೋಜ ಚನ್ನವೀರ ಕಣವಿ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ. ಕಣವಿಯವರಿಗೆ ಮರಣೋತ್ತರ  ರಾಷ್ಟ್ರಕವಿ ಬಿರುದನ್ನು ನೀಡಬೇಕೆಂದು ಎಂದು ಜಿಲ್ಲಾ  ಕಸಾಪ ಮಾಜಿ ಅಧ್ಯಕ್ಷ ಎಸ್.ಹೆಚ್.ಹೂಗಾರ್ ಆಗ್ರಹಿಸಿದರು.

ನಗರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯ ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ ನಾಡೋಜ ಚನ್ನವೀರ ಕಣವಿಯವರ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಕಾವ್ಯವೇ ಜೀವನ ಎಂದು ಬದುಕಿದ ನಾಡಿನ ಅಗ್ರಗಣ್ಯ ಹಾಗೂ ಚೆಂಬೆಳಕಿನ ಖ್ಯಾತಿಯ ಹಿರಿಯ ಕವಿಯಾಗಿದ್ದರು. ಕನ್ನಡನಾಡು ಕಂಡ ಸೃಜನಶೀಲ ಸಾಹಿತಿ,  ಸರಳ ಸಜ್ಜನಿಕೆಯ, ಮೃದು ಸ್ವಭಾವದ ಮಾನವೀಯ ಮೌಲ್ಯಗಳನ್ನು ಹೊಂದಿರುವ ಅಪರೂಪದ ವ್ಯಕ್ತಿತ್ವವನ್ನು ಹೊಂದಿದ್ದರು. ವಿಶ್ವಭಾರತಿಗೆ ಕನ್ನಡದಾರತಿ ಬೆಳಗಿ ಕನ್ನಡಿಗರ ಮನಸ್ಸಿನಲ್ಲಿ ಕನ್ನಡದ ಜಾಗೃತಿ ಮೂಡಿಸಿದ ಹೆಮ್ಮೆಯ ಕವಿ ಚನ್ನವೀರ ಕಣವಿಯವರಾಗಿದ್ದರು. ಈಗಾಗಲೇ ಚಂಪಾ, ಪ್ರೊ.ಸಿದ್ಧಲಿಂಗಯ್ಯನವರನ್ನು ಕಳೆದುಕೊಂಡ ಬೆನ್ನಲ್ಲೇ ಚನ್ನವೀರ ಕಣವಿಯವರ ನಿಧನ ತುಂಬಾ ನೋವುಂಟುಮಾಡಿದೆ. ಇಂತಹ ಮಹನೀಯರ ಸ್ಮರಣೆಯಿಂದ ಪ್ರೇರಣೆ ಪಡೆದು ಹೊಸ ಸಾಹಿತಿಗಳು, ಚಿಂತಕರು ಬೆಳೆಯಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಬಿಎಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲ  ಮೃತ್ಯುಂಜಯ, ಆಧುನಿಕ ಕನ್ನಡ ಕಾವ್ಯದ ಮೇರು ಪ್ರತಿಭೆಗಳಲ್ಲಿ ಒಬ್ಬರಾದ ಚೆಂಬಳಕಿನ ಕವಿ, ಸುನೀತಗಳ ಸಾಮ್ರಾಟರೆಂದೇ  ಕನ್ನಡಿಗರ ಹೃದಯ ಗೆದ್ದ ಕವಿ ಚನ್ನವೀರ ಕಣವಿ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟವಾಗಿದೆ. ಕಣವಿಯವರ ಕಾವ್ಯಗಳಲ್ಲಿ ರಮ್ಯ ಮನೋಧರ್ಮ, ಆದರ್ಶಪ್ರಿಯತೆ, ಉತ್ತಮ ವ್ಯಕ್ತಿತ್ವ ನಿರ್ಮಾಣದ ಹಂಬಲಗಳು ಎದ್ದು ಕಾಣುತ್ತವೆ. ಬದುಕನ್ನು ಸ್ನೇಹ, ಪ್ರೀತಿ, ವಾತ್ಸಲ್ಯದಿಂದ ಸವಿಯಬೇಕು. ಕವಿತೆಗಳು ಜನರಿಗೆ ತಲುಪಬೇಕು ಎಂದು ಬಯಸಿ ನಿಸರ್ಗ, ಪ್ರಾಣಿ-ಪಕ್ಷಿ, ಮಕ್ಕಳು ಹಾಗೂ ದಾಂಪತ್ಯವನ್ನು ಕುರಿತು ಕವಿತೆಗಳನ್ನು ಬರೆದಿದ್ದಾರೆ. ಅದಮ್ಯ ಜೀವನ ಪ್ರೀತಿಯ ಕಣವಿಯವರ ಕಾವ್ಯಗಳು ಬದುಕಿನ ನೋವು ನಲಿವುಗಳನ್ನು  ಪ್ರತಿಬಿಂಬಿಸುತ್ತವೆ. ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ  ಎಂಬುದು ಅವರ ಕಾವ್ಯಗಳ ಹಾರೈಕೆಯಾಗಿತ್ತು. ಬದುಕನ್ನು ಹಿತವಾಗಿಸಿಕೊಂಡು ನೆಮ್ಮದಿಯಿಂದ ಬದುಕುವ ಅಗತ್ಯವನ್ನು ಅವರ ಕಾವ್ಯಗಳು ಒತ್ತಿ ಹೇಳುತ್ತವೆ ಎಂದು ತಿಳುಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ,  ಚನ್ನವೀರ ಕಣವಿಯವರಿಗೆ ಮರಣೋತ್ತರ ರಾಷ್ಟ್ರಕವಿ ಪ್ರಶಸ್ತಿ ನೀಡುವುದರ ಜೊತೆಗೆ ಅವರ ಸಮಗ್ರ ಸಾಹಿತ್ಯವನ್ನು ಸಂಪುಟಗಳಲ್ಲಿ ಕರ್ನಾಟಕ ಸರ್ಕಾರ ಪ್ರಕಟಿಸಬೇಕೆಂದು ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಬಿ.ಬಿ.‌ ರೇವಣ್ಣನಾಯ್ಕ್  ಪರಸ್ಪರ ಬಳಗದ ಸಂಚಾಲಕ ಎ. ರಿಯಾಜ್ ಆಹ್ಮದ್, ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಎ. ಭೀಕ್ಷಾವರ್ತಿ ಮಠ್, ಪ್ರೊ. ಸಿ.ವಿ. ಪಾಟೀಲ್, ಜೆ. ಕಲೀಂಭಾಷಾ, ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶ್, ಎನ್.ಇ. ಸುರೇಶ್, ಈಶಪ್ಪ ಬೂದಿಹಾಳ್‌, ಅಬ್ದುಲ್ ಸಲೀಂ, ನಾಗರಾಜ್, ಕೃಷ್ಣಪ್ಪ ಭಜಂತ್ರಿ ಇತರರು ಹಾಜರಿದ್ದರು.

error: Content is protected !!