ತರಳಬಾಳು ಹುಣ್ಣಿಮೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ
ಸಿರಿಗೆರೆ, ಫೆ. 16 – ಭದ್ರಾ ಮೇಲ್ದಂಡೆ ಯೋಜನೆ ಯನ್ನು ರಾಷ್ಟ್ರೀಯ ಯೋಜನೆ ಯಾಗಿ ಘೋಷಣೆ ಮಾಡಲು ಕೇಂದ್ರ ಸರ್ಕಾರದ ಉನ್ನತ ಹಂತದ ಸಮಿತಿ ನಿನ್ನೆ ಅನುಮೋದನೆ ನೀಡಿದೆ. ರಾಷ್ಟ್ರೀಯ ಯೋಜನೆಯ ನೆರವಿನಿಂದ ರಾಜ್ಯಕ್ಕೆ ಸುಮಾರು 12,500 ಕೋಟಿ ರೂ.ಗಳ ನೆರವು ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ತರಳಬಾಳು ಬೃಹನ್ಮಠದ ವತಿಯಿಂದ ಆಯೋಜಿಸಲಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಈ ಯೋಜನೆ ಮಧ್ಯ ಕರ್ನಾಟಕದಲ್ಲಿ ನೀರಾವರಿಗೆ ತುಂಬಾ ಸಹಕಾರಿಯಾಗಿದೆ. ಇದರಿಂದ ಅಂತರ್ಜಲವೂ ಹೆಚ್ಚಾಗಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರ ಜೊತೆಗೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಗಳನ್ನು ಕೈಗೆತ್ತಿಕೊಂಡಿದ್ದೇವೆ. ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾ ಚಾರ್ಯ ಸ್ವಾಮೀಜಿಗಳ ಆಶಯದಂತೆ ನೀರು ಭರ್ತಿ ಮಾಡಲು ಆಗುವ ವಿದ್ಯುತ್ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್, ರೈತರ ಸೇವೆ ಮಾಡಲಿಕ್ಕಾಗಿ ಯಡಿಯೂರಪ್ಪ ಅವರನ್ನು ಕೇಳಿ ಕೃಷಿ ಖಾತೆ ಪಡೆದಿದ್ದೆ. ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದೇನೆ. ರೈತರ ಮಕ್ಕಳು ಕೃಷಿ ಬಿ.ಎಸ್ಸಿ. ಪದವಿಯಲ್ಲಿ ಪಡೆಯುತ್ತಿದ್ದ ಮೀಸಲಾತಿಯನ್ನು ಶೇ.40 ರಿಂದ 50ಕ್ಕೆ ಹೆಚ್ಚಿಸಲಾಗಿದೆ. ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಸ್ಥಾಪಿಸಲಾಗಿದೆ ಎಂದರು.
ಯಡಿಯೂರಪ್ಪ – ಬೊಮ್ಮಾಯಿ ಅಪ್ಪ ಮಕ್ಕಳಿದ್ದ ಹಾಗೆ
ರಾಜ್ಯದ ಅಧಿಕಾರದ ಚುಕ್ಕಾಣಿಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದ್ದಾರೆ. ಬೊಮ್ಮಾಯಿ ಕೈಗೆ ಬೀಗ ಕೊಟ್ಟರೆ ಉಪೇಕ್ಷೆ ಮಾಡಿಲ್ಲ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಶ್ಲೇಷಿಸಿದ್ದಾರೆ.
ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅಪ್ಪ – ಮಕ್ಕಳಿದ್ದ ಹಾಗೆ. ಇಂದು ಯಡಿಯೂರಪ್ಪ ಮಾತನಾಡಿದ್ದು ಅವರ ಅಂತರಂಗದಿಂದ ಬಂದ ಮಾತುಗಳು ಎಂದು ಶ್ರೀಗಳು ಹೇಳಿದರು.
ಆದರೆ, ಉಭಯರ ನಡುವೆ ವ್ಯತ್ಯಾಸ ಇದೆ. ಯಡಿಯೂರಪ್ಪ ಅವರದ್ದು’ಇನ್ಸ್ಟಂಟ್’ (ತ್ವರಿತ ನಿರ್ಧಾರ). ಜನತೆಗಾಗಿ ಯಾವುದಾದರೂ ಯೋಜನೆ ಬಗ್ಗೆ ಕೇಳಿದರೆ ಅಧಿಕಾರಿಗಳಿಗೆ ತ್ವರಿತ ಗತಿಯಲ್ಲಿ ಸೂಚನೆ ನೀಡುತ್ತಿದ್ದರು.ಆದರೆ, ಬೊಮ್ಮಾಯಿ ಹಾಗೆ ಮಾಡುವುದಿಲ್ಲ. ಕಾರ್ಯ ಕೇಳಿಸಿಕೊಂಡು ಆಲೋಚನೆ ಮಾಡಿ, ನಿಧಾನವಾಗಿಯಾದರೂ ಕೆಲಸ ಮಾಡುತ್ತಾರೆ ಎಂದರು.
ಏತ ನೀರಾವರಿ ಯೋಜನೆಯ ಮುತ್ತೈದೆಯರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಮಾಧುಸ್ವಾಮಿ, ಸಿ.ಸಿ. ಪಾಟೀಲ್, ಗೋವಿಂದ ಕಾರಜೋಳ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಜಗಳೂರು ಏತ ನೀರಾವರಿ ಯೋಜನೆಯ ಮುತ್ತೈದೆಯರು ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದ್ದಾರೆ.
ಜೋಡಿ ಏತ ನೀರಾವರಿ ಯೋಜನೆಗಳಾದ ಜಗಳೂರು ಹಾಗೂ ಭರಮಸಾಗರ ಯೋಜನೆಗಳಿಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಒಪ್ಪಿಗೆ ನೀಡಲಾಗಿತ್ತು. ಆದರೆ, ಕೇವಲ 250 ಕೋಟಿ ರೂ. ಬಿಡುಗಡೆಯಾಗಿತ್ತು. ಈ ಬಗ್ಗೆ ರವಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದೆ. ಆಗ ಈ ಐವರು ಮುತ್ತೈದೆಯರು ಯಡಿಯೂರಪ್ಪನವರ ಮನವೊಲಿಸಿದ್ದರು ಎಂದು ಕಾಣುತ್ತದೆ. ವಾರದಲ್ಲೇ ಯಡಿಯೂರಪ್ಪನವರು 1,200 ಕೋಟಿ ರೂ. ಮಂಜೂರು ಮಾಡಿದ್ದರು ಎಂದು ಶ್ರೀಗಳು ತಿಳಿಸಿದರು.
1721ರಲ್ಲಿ ಭರಮಣ್ಣ ನಾಯಕರು ಭರಮಸಾಗರ ಕೆರೆ ಕಟ್ಟಿದ್ದರು. ಇದಾಗಿ ಸರಿಯಾಗಿ 300 ವರ್ಷಗಳ ನಂತರ 2021ರಲ್ಲಿ ಕೆರೆ ತುಂಬಿದೆ ಎಂದವರು ಹೇಳಿದರು.
ಕೆರೆ ನೀರು ತುಂಬಿರುವ ಭರಮಸಾಗರ ಈಗ ತೀರ್ಥ ಕ್ಷೇತ್ರದಂತಾಗಿದೆ. ಕೆರೆ ಏರಿ ಬಿರುಕಾಗಿದೆ ಎಂಬ ಆತಂಕ ಇದೆ. ಆದರೆ, ಇದರಿಂದ ಕೆರೆ ಏರಿ ಒಡೆಯದು. ಈ ಬಗ್ಗೆ ಯಾವುದೇ ಹೆದರಿಕೆ ಬೇಡ ಎಂದು ಶ್ರೀಗಳು ತಿಳಿಸಿದರು.
ವೀರ ಮರಣ ಹೊಂದಿದ ಸೈನಿಕರ ಕುಟುಂಬದವರಿಗೆ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಿ, ಮಠದಿಂದ ತಲಾ 50 ಸಾವಿರ ರೂ.ಗಳನ್ನು ನೀಡಲಾಯಿತು. ಸೈನಿಕರ ಕುಟುಂಬದವರು ಕುಂದು ಕೊರತೆಗಳ ಮನವಿ ಪತ್ರವನ್ನು ಶ್ರೀಗಳಿಗೆ ನೀಡಿದರು. ಈ ಮನವಿಯನ್ನು ಶ್ರೀಗಳು ಬೊಮ್ಮಾಯಿ ಅವರಿಗೆ ನೀಡಿದರು.
ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, 2011ರ ಬ್ಯಾಚ್ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯಲ್ಲಿ 362 ಜನ ಪಾಸ್ ಆಗಿದ್ದರೂ ಇನ್ನೂ ನೇಮಕಾತಿ ಆಗಿಲ್ಲ. ಉಪವಿಭಾಗಾಧಿಕಾರಿಯಂತಹ ಹುದ್ದೆಗೆ ಹೋಗಬೇಕಿದ್ದ ಬುದ್ಧಿವಂತರು ಈಗ ಸಣ್ಣ ಕೆಲಸಗಳಲ್ಲಿದ್ದಾರೆ. ಸಂಪುಟದಲ್ಲಿ ತೀರ್ಮಾನವಾಗಿದ್ದರೂ, ಅವರಿಗೆ ಆತಂಕವಿದೆ. ಇವರ ನೇಮಕದ ದುಗುಡ ನಿವಾರಣೆಯಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ.ಸಿದ್ದೇಶ್ವರ, ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ, ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ, ಹೊನ್ನಾಳಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ನೀರಾವರಿ ನಿಗಮದ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಸಪ್ಪ ಗುಂಗೆ, ಮಾಜಿ ಸಚಿವ ಹೆಚ್.ಆಂಜನೇಯ, ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ, ದಾವಣಗೆರೆ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಮತ್ತಿತರರು ಉಪಸ್ಥಿತರಿದ್ದರು.