ಮಲೇಬೆನ್ನೂರು, ಫೆ.16 – ಹಿಜಾಬ್ ವಿವಾದದಿಂದಾಗಿ ರಜೆ ನೀಡಲಾಗಿದ್ದ ಕಾಲೇಜುಗಳು ಬುಧವಾರದಿಂದ ಮತ್ತೆ ಪ್ರಾರಂಭಗೊಂಡಿವೆ.
ಹೈಕೋರ್ಟ್ ಸೂಚನೆ ಮತ್ತು ಸರ್ಕಾರದ ಆದೇಶದ ನಡುವೆಯೂ ಮಲೇಬೆನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ 15 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸಿದ್ದರು.
ಇದೇ ವೇಳೆಗೆ ಆಗಮಿಸಿದ ನೋಡಲ್ ಅಧಿಕಾರಿಗಳೂ ಆದ ಯೋಜನಾ ನಿರ್ದೇಶಕರಾದ ಶ್ರೀಮತಿ ನಜ್ಮಾ ನೇತೃತ್ವದ ಅಧಿಕಾರಿಗಳ ತಂಡ ಹಿಜಾಬ್ ಧರಿಸಿ ಆಗಮಿಸಿದ್ದ ವಿದ್ಯಾರ್ಥಿನಿಯರಿಗೆ ಹೈಕೋರ್ಟ್ ಸೂಚನೆ ತಿಳಿಸಿ, ಹಿಜಾಬ್ ತೆಗೆದು ತರಗತಿಗಳಿಗೆ ತೆರಳುವಂತೆ ಹೇಳಿದರು.
ಇದಕ್ಕೆ ಐವರು ವಿದ್ಯಾರ್ಥಿನಿಯರು ಒಪ್ಪಿಗೆ ನೀಡಿ, ಹಿಜಾಬ್ ತೆಗೆದು ತರಗತಿಗಳಿಗೆ ಹಾಜರಾ ದರೆ ಉಳಿದ 10 ವಿದ್ಯಾರ್ಥಿನಿಯರು ಹಿಜಾಬ್ ತೆಗೆಯದಂತೆ ಮನೆಯಲ್ಲಿ ಹೇಳಿ ಕಳುಹಿಸಿದ್ದಾರೆ, ಹಾಗಾಗಿ ನಾವು ಹಿಜಾಬ್ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು. ಹಿಜಾಬ್ ಸೇರಿದಂತೆ ಯಾವುದೇ ಶಾಲು ಧರಿಸಿ ತರಗತಿಗೆ ಬರಲು ಅವಕಾಶ ಇಲ್ಲ ಎಂದಾಗ, 10 ವಿದ್ಯಾರ್ಥಿನಿಯರು ಮನೆಗೆ ವಾಪಸ್ಸಾದರು.
ಇದಾದ ಸ್ವಲ್ಪ ಹೊತ್ತಿಗೆ ಉಪವಿಭಾಗಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಕೂಡಾ ಕಾಲೇಜಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಈ ವೇಳೆ ಹಿಜಾಬ್ ಧರಿಸಿದ್ದ ಶಿಕ್ಷಕಿಗೂ ಕೂಡಾ ತಿಳಿ ಹೇಳಿ ಹಿಜಾಬ್ ತೆರವು ಮಾಡಿಸಿದರು.
ಜಿಲ್ಲಾ ಬಿಸಿಎಂ ಅಧಿಕಾರಿ ಅಮಿತ್ ಬಿದರಿ, ಉಪತಹಶೀಲ್ದಾರ್ ಆರ್.ರವಿ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ರುಕ್ಮಿಣಿ, ಪಿ.ಎಸ್.ಐ. ರವಿಕುಮಾರ್ ಈ ವೇಳೆ ಹಾಜರಿದ್ದರು. ನಂತರ ಬೀರಲಿಂಗೇಶ್ವರ ಪಿಯು ಹಾಗೂ ಡಿಗ್ರಿ ಕಾಲೇಜುಗಳಿಗೆ ಮತ್ತು ಮಾಲ ತೇಶ್ ಕಾಲೇಜಿಗೆ ಶ್ರೀಮತಿ ನಜ್ಮಾ ನೇತೃತ್ವದ ಅಧಿಕಾರಿಗಳು ತೆರಳಿ ಹಿಜಾಬ್ ಧರಿಸಿ ತರಗತಿಗಳಿಗೆ ಬಾರದಂತೆ ವಿದ್ಯಾರ್ಥಿನಿಯರಿಗೆ ತಿಳಿಸಿ, ಕಾಲೇಜು ಮುಖ್ಯಸ್ಥರಿಗೂ ಕೆಲವು ಸೂಚನೆಗಳನ್ನು ನೀಡಿದರು.
ಇದಾದ ಸ್ವಲ್ಪ ಹೊತ್ತಿನ ನಂತರ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪಿಯು ಡಿಡಿ ಶಿವರಾಜ್ ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಆಗಮಿಸಿ, ಪ್ರಾಚಾರ್ಯ ಹೆಚ್.ಎಸ್. ರಂಗಪ್ಪ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ, ಉಪನ್ಯಾಸಕರ ಜೊತೆ ಸಭೆ ನಡೆಸಿದರು.
ಗುರುವಾರ ಬೆಳಗ್ಗೆ ಕಾಲೇಜಿನಲ್ಲಿ ಎಲ್ಲಾ ಪೋಷಕರ ಸಭೆ ಕರೆದು ಹಿಜಾಬ್ ಧರಿಸಿ ತರಗತಿಗಳಿಗೆ ಬರುವುದಕ್ಕೆ ಅವಕಾಶ ಇಲ್ಲ ಎಂಬ ಹೈಕೋರ್ಟ್ ಹಾಗೂ ಸರ್ಕಾರದ ಸೂಚನೆಗಳನ್ನು ತಿಳಿಸುವಂತೆ ಹೇಳಿದ ಶಿವರಾಜ್ ಅವರು, ಹಿಜಾಬ್ ತೆರವು ಮಾಡದೆ ತರಗತಿಗಳಿಗೆ ಅವಕಾಶ ಇಲ್ಲ ಸ್ಪಷ್ಟ ಸಂದೇಶವನ್ನು ಎಲ್ಲಾ ಪೋಷಕರಿಗೆ ಮನವರಿಕೆ ಮಾಡಿಕೊಡಿ ಎಂದರು.
ಇದೇ ವೇಳೆಗೆ ಹಿಜಾಬ್ ತೆಗೆಯುವುದಿಲ್ಲ ಎಂದು ಹೇಳಿ ಮನೆಗೆ ವಾಪಸ್ಸಾಗಿದ್ದ ವಿದ್ಯಾರ್ಥಿ ನಿಯರನ್ನು ಕಾಲೇಜಿಗೆ ಕರೆತಂದ ಪೋಷಕರು, ನಮ್ಮ ಮಕ್ಕಳನ್ನು ಯಾಕೆ ಮನೆಗೆ ಕಳುಹಿಸಿದ್ದೀರಿ ? ಎಂದು ಪ್ರಶ್ನಿಸಿ ಹಿಜಾಬ್ ಇಲ್ಲದಂತೆ ಕಾಲೇಜಿಗೆ ಬರಬೇಕೆಂಬ ಆದೇಶವೆಲ್ಲಿದೆ ತೋರಿಸಿ ಎಂದರು. ಆಗ ಕಾಲೇಜಿನ ಪ್ರಾಚಾ ರ್ಯರು, ಸರ್ಕಾರದ ಆದೇಶ ತೋರಿಸಿದರು.
ಇದಕ್ಕೆ ಸಮಾಧಾನಗೊಳ್ಳದ ಪೋಷಕ ಮಹಮದ್ ರೋಷನ್ ಅಲಿ ಅವರು, ವೇಲ್ ಹಾಕಿ ಕೊಳ್ಳುವುದಕ್ಕೆ ಅವಕಾಶ ಕೊಡಿ ಎಂದಾಗ ಅದಕ್ಕೂ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು. ಆಗ ವಿದ್ಯಾರ್ಥಿನಿಯರು ನಾವು ಹಿಜಾಬ್ ತೆಗೆಯುತ್ತೇವೆ ಸಮವಸ್ತ್ರ ನಿಗದಿ ಮಾಡಿ ಎಂದರು. ಈ ಬಗ್ಗೆ ನಾಳೆಯೇ ತಿರ್ಮಾನ ಮಾಡಿ ಎಂದು ಪಿಯು ಡಿಡಿ ಸೂಚಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮೀರ್ ಅಜಾಂ, ಸದಸ್ಯರಾದ ಹಾಲಿವಾಣ ರೇವಣ ಸಿದ್ದಪ್ಪ, ಕೊಕ್ಕನೂರಿನ ಚಂದ್ರಪ್ಪ, ಉಪನ್ಯಾಸಕರಾದ ತಿಪ್ಪೇಸ್ವಾಮಿ, ಗೊಲ್ಲರಹಳ್ಳಿ ಮಂಜುನಾಥ್, ಪಿಎಸ್ಐ ರವಿಕುಮಾರ್ ಹಾಜರಿದ್ದರು.
ಶಾಲೆ – ಕಾಲೇಜುಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿತ್ತು.