ಹರಪನಹಳ್ಳಿ, ಫೆ.16- ಮಧ್ಯ ಕರ್ನಾಟಕದ ಐತಿಹಾಸಿಕ ಉಚ್ಚೆಂಗೆಮ್ಮ ದೇವಿ ಸನ್ನಿಧಿಯಲ್ಲಿ ಈ ಬಾರಿಯ ಭರತ ಹುಣ್ಣಿಮೆಗೆ ಗ್ರಾಮಸ್ಥರನ್ನು ಹೊರತುಪಡಿಸಿ ಹೊರಗಿನ ಭಕ್ತರ ಸಂಖ್ಯೆ ವಿರಳ ವಾಗಿತ್ತು
ರಾಜ್ಯದ ಅಲ್ಲಲ್ಲಿ ಸೋಂಕು ಉಲ್ಬಣ ಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಕೇವಲ ದೇವಿಯ ಪೂಜಾ ಕಾರ್ಯಕ್ರಮಗಳನ್ನು ಹೊರತು ಪಡಿಸಿ ಮುಂಜಾಗ್ರತಾ ಕ್ರಮವಾಗಿ ಐತಿಹಾಸಿಕ ಭರತ ಹುಣ್ಣಿಮೆ ಆಚರಣೆಯನ್ನು ಸ್ಥಳೀಯರಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಗ್ರಾಮದ ಸುತ್ತ ಮುತ್ತ ಜನ ಎತ್ತಿನಗಾಡಿ ಟ್ರ್ಯಾಕ್ಟರ್ ಸೇರಿದಂತೆ ಯಾವುದೇ ವಾಹನಗಳ ಮೂಲಕ ಕ್ಷೇತ್ರಕ್ಕೆ ಬರದಂತೆ ಬಿಗಿ ಕ್ರಮ ಕೈಗೊಳ್ಳಲಾಗಿತ್ತು.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದ್ದು, ಹೊರಗಿನ ಭಕ್ತರು ಅಲ್ಲೇ ಪೂಜೆ ಮುಗಿಸಿ ತಮ್ಮ ಊರುಗಳಿಗೆ ತೆರಳಿದರು.
ಗ್ರಾಮದ ಸುತ್ತಮುತ್ತಲಿನ ಭಕ್ತರಿಗೆ ವಾಸ್ತವ್ಯಕ್ಕೆ ಅವಕಾಶವಿಲ್ಲದ್ದರಿಂದ ಬರುವ ಭಕ್ತರು ದೇವರ ದರ್ಶನ ಪಡೆದು ಮರಳುತ್ತಿದ್ದರು. ಹುಣ್ಣಿಮೆ ಅಂಗವಾಗಿ ದೇವಸ್ಥಾನದಲ್ಲಿ ಎಂದಿನಂತೆ ನಡೆಯುವ ಸಂಪ್ರದಾಯದ ಪೂಜೆ. ಧಾರ್ಮಿಕ ಕಾರ್ಯಗಳು ಜರುಗಿದವು.
ಪುನರ್ವಸತಿ ಯೋಜನೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಯವರು ದೇವದಾಸಿ ಪದ್ದತಿ ಆಚರಣೆ ಮಾಡದಂತೆ ಆನೆ ಹೊಂಡ. ಅರಿಶಿನ ಹೊಂಡ. ಪಾದಗಟ್ಟಿ ಬಳಿ ಕರಪತ್ರ ಹಂಚಿ ಜಾಗೃತಿ ಮೂಡಿಸಿ, ದೇವಿಯ ಹೆಸರಿನಲ್ಲಿ ಜಡೆ ಬಿಟ್ಟಿದ್ದ ಭಕ್ತರ ಜಡೆಯನ್ನು ಜಾಗೃತಿ ಮೂಡಿಸಿ ಕತ್ತರಿಸಿದರು.
ಎಲ್ಲೆಡೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಈ ವೇಳೆ ಸಿಪಿಐ ನಾಗರಾಜ ಕಮ್ಮಾರ್, ಅರಸಿಕೇರಿ ಪಿಎಸ್ಐ ನಾಗರತ್ನ, ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪ್ರಜ್ಞಾ ಪಾಟೀಲ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಸೇರಿದಂತೆ ಇತರರು ಇದ್ದರು.