144ನೇ ಸೆಕ್ಷನ್‌ಗೆ ಶಾಸಕ ರಾಮಪ್ಪ ಅಸಮಾಧಾನ
ಹರಿಹರ, ಫೆ. 17- ನಗರದ ಐತಿಹಾಸಿಕ ಶ್ರೀ ಹರಿಹರೇಶ್ವರ ರಥೋತ್ಸವವು ಬೆಳಗ್ಗೆ 5.20ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಶ್ರೀ ಹರಿಹರೇಶ್ವರ ಸ್ವಾಮಿಗೆ ಬೆಳಗಿನ ಜಾವದಲ್ಲಿ ಧಾರ್ಮಿಕ ವಿಧಿ, ವಿಧಾನಗಳು, ರುದ್ರಾಭಿಷೇಕ, ಸಹಸ್ರ ನಾಮ, ಅಲಂಕಾರ, ಮಹಾಮಂಗಳಾರತಿ ಮಾಡಿ ನಂತರದಲ್ಲಿ ಪಲ್ಲಕ್ಕಿ ಮೇಲೆ ಉತ್ಸವ ಮೂರ್ತಿಯನ್ನು ರಥದಲ್ಲಿರಿಸಿ ಉತ್ಸವ ನಡೆಸಲಾಯಿತು. ಅಪಾರ ಭಕ್ತರ ಸಮ್ಮುಖದಲ್ಲಿ ಬೆಳಗಿನ ಜಾವ ಐದು ಹೆಜ್ಜೆ ಮಾತ್ರ ರಥವನ್ನು ಎಳೆಯುವ ಮೂಲಕ ರಥೋತ್ಸವ ಆಚರಣೆ ಮಾಡಲಾಯಿತು.
ನಗರದಲ್ಲಿನ ವಿವಿಧ ಸಾಂಸ್ಕೃತಿಕ ಸಂಘಟನೆಯ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಸಾರ್ವಜನಿಕರ ಆಕ್ರೋಶ : ರಥೋತ್ಸವವನ್ನು ಈ ವರ್ಷ ಪದ್ಧತಿಯ ಪ್ರಕಾರ ಬೆಳಗ್ಗೆ 10.45 ಕ್ಕೆ ನಿಗದಿ ಮಾಡಲಾಗಿತ್ತು. ಆದರೆ, ನಗರದಲ್ಲಿ 144ನೇ ಸೆಕ್ಷನ್ ಜಾರಿಯಲ್ಲಿ ಇರುವುದರಿಂದ ರಥೋತ್ಸವ ಆಚರಣೆ ಮಾಡುವುದಕ್ಕೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ನಿರಾಕರಿಸಿ, ಕೇವಲ ಪೂಜೆ, ವಿಧಿ, ವಿಧಾನಗಳನ್ನು ಮಾತ್ರ ಮಾಡುವುದಕ್ಕೆ ಅನುಮತಿ ನೀಡಿತು.
ಹಾಗಾಗಿ ದೇವಾಲಯದ ಆವರಣದಲ್ಲಿ ದೇವರಿಗೆ ರಾತ್ರಿ ಪೂಜಾ ಕಾರ್ಯಗಳನ್ನು ನಡೆಸಿ, ನಂತರದಲ್ಲಿ ಬೆಳಿಗ್ಗೆ ರಥವನ್ನು ಐದು ಹೆಜ್ಜೆ ಮಾತ್ರ ಎಳೆಯುವುದಕ್ಕೆ ಅವಕಾಶ ನೀಡಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಎಸ್. ರಾಮಪ್ಪ ಅವರು ಈ ಬಗ್ಗೆ ಮಾತನಾಡಿದ್ದು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತುಘಲಕ್ ದರ್ಬಾರ್ ಮಾಡುವುದಕ್ಕೆ ಮುಂದಾಗಿದ್ದು, ಅದನ್ನು ಕೈ ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಜನರ ಮಾತಿಗೆ ಮನ್ನಣೆ ಕೊಡದೆ, ತುಘಲಕ್ ಸಾಮ್ರಾಜ್ಯದ ದರ್ಬಾರ್ ಮಾಡುತ್ತಿದ್ದಾರೆ. ಮಾಜಿ ಶಾಸಕ ಬಿ.ಪಿ. ಹರೀಶ್ ಸಹ ಜಿಲ್ಲಾಧಿಕಾರಿ ಕಂಡು ಮನವಿಯನ್ನು ಕೊಟ್ಟು ಬಂದಿದ್ದರು. ಆದರೆ, ಜಿಲ್ಲಾಧಿಕಾರಿಗಳು ಯಾರ ಮಾತಿಗೂ ಮನ್ನಣೆ ಕೊಡಲಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಬಿ.ಪಿ. ಹರೀಶ್, ನಾರಾಯಣ ಜೋಯಿಸರು, ಚಿದಂಬರ, ಹರಿಶಂಕರ್, ಕೃಷ್ಣಮೂರ್ತಿ, ಗುರುಪ್ರಸಾದ್, ಶೇಷಾಚಲ, ವಾರಿಜಾ ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು.