ವಿದ್ಯಾರ್ಥಿಗಳಿಗೆ ಹಂಪಿ ಕನ್ನಡ ವಿವಿ ಮಾಜಿ ಉಪಕುಲಪತಿ ಪ್ರೊ|| ಎ. ಮುರಿಗೆಪ್ಪ ಸಲಹೆ
ದಾವಣಗೆರೆ,ಫೆ.16- ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಉಂಟಾಗುವ ಅಡೆತಡೆಗಳ ವಿರುದ್ದ ಧ್ವನಿ ಎತ್ತಬೇಕೇ ಹೊರತು ಧರ್ಮಾಚರಣೆಗಳಿಗಲ್ಲ ಎಂದು ಹಂಪಿ ಕನ್ನಡ ವಿವಿಯ ಮಾಜಿ ಉಪಕುಲಪತಿ ಪ್ರೊ|| ಎ. ಮುರಿಗೆಪ್ಪ ಹೇಳಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಸಂಘಟಿಸಿರುವ ‘ರಾಜ್ಯದ ಪ್ರಸಕ್ತ ಶೈಕ್ಷಣಿಕ ಸಮಸ್ಯೆ ಗಳು ಹಾಗು ಸವಾಲುಗಳು’ ಎಂಬ ರಾಜ್ಯ ಮಟ್ಟದ ವೆಬಿನಾರ್‍ನಲ್ಲಿ ಅವರು ಮಾತನಾಡಿದರು.
ಶಿಕ್ಷಣ ಕೇತ್ರವಿಂದು ಹಿಂದೆಂದೂ ಕಂಡರಿ ಯದಂಥ ಸಮಸ್ಯೆಗಳನ್ನು ಎದುರಿಸುತ್ತಿದೆ, ಪರೀಕ್ಷೆ ಸಮೀಪಿಸುತ್ತಿವೆ ಆದರೆ ಪಠ್ಯಕ್ರಮ ಮುಗಿದಿಲ್ಲ. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನಾರ್ಜನೆಗಾಗಿ ಉಂಟಾಗುವ ಇಂತಹ ಅಡೆತಡೆಗಳ ವಿರುದ್ದ ಧ್ವನಿ ಎತ್ತಬೇಕಿದೆ. ಜೊತೆಗೆ ಒಡಕುಂಟು ಮಾಡುವ ಎಲ್ಲ ಶಕ್ತಿಗಳ ವಿರುದ್ದ ಒಗ್ಗಟ್ಟಾಗಬೇಕಿದೆ ಎಂದು ಕರೆ ನೀಡಿದರು.
ಸಮಿತಿ ರಾಜ್ಯ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಮಾತನಾಡುತ್ತಾ, ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ, ಅತಿಥಿ ಶಿಕ್ಷಕರ ಗೋಳು ಸಂಪೂರ್ಣ ಬಗೆಹರಿಸಿಲ್ಲ. ಶಿಕ್ಷಕ ಹಸಿದಿದ್ದಾಗ ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡಲು ಸಾಧ್ಯ ಎಂದರು. ಮೂಲ ಸಮಸ್ಯೆ ಹಿಜಾಬ್ ನಮ್ಮಲ್ಲಿಲ್ಲ ನಮ್ಮನ್ನಾಳುವವರಲ್ಲಿದೆ. ಬಹು ಸಂಸ್ಕೃತಿಯ ಮೇಲೆ ಏಕ ಸಂಸ್ಕೃತಿಯನ್ನು ಹೇರ ಹೊರಟಾಗ ಇಂಥ ಸಮಸ್ಯೆಗಳು ತಲೆ ದೋರುತ್ತವೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿ.ಎನ್. ರಾಜಶೇಖರ್, ಸರ್ಕಾರದ ಬಳಿ ಸ್ಪಷ್ಟ ಸಮವಸ್ತ್ರ ನೀತಿ ಇಲ್ಲದಿರುವುದರಿಂದಾಗಿಯೇ ಬೀದಿಯಲ್ಲಿನ ಪುಂಡರು, ಪೋಕರಿಗಳು ಸಮವಸ್ತ್ರದ ಕುರಿತು ಮಾತನಾಡುವಂತಾಗಿದೆ. ದೇಶ ಇಂದು ಹಿಂದೆಂ ದೂ ಕಂಡರಿಯದ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಇದರ ವಿರುದ್ದ ದೇಶಾದ್ಯಂತ ಹೋರಾಟಗಳು ಭುಗಿಲೇಳುತ್ತಿವೆ. ಈ ಹೋರಾಟಗಳನ್ನು ದಿಕ್ಚುತಿಗೊಳಿಸಲು ಸರ್ಕಾರ ಈ ಹಿಜಾಬ್ ಮತ್ತು ಕೇಸರಿ ಶಾಲಿನ ಗಲಭೆಯನ್ನು ಎಬ್ಬಿಸಿದೆ ಎಂದರು.
ಸಂತ ಜೋಸೆಫ್ ಸಂವಹನ ಮತ್ತು ಮಾಧ್ಯಮ ಅಧ್ಯಯನ ವಿಭಾಗದ ನಿರ್ದೇಶಕ ಡಾ. ರಿಚರ್ಡ್ ರೆಗೋ, ಹೈದರಾಬಾದಿನ ಸಿಯಾಸತ್ ಉರ್ದು ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಜಹೀರುದ್ದೀನ್ ಅಲಿಖಾನ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಪ್ರೀತಿ ಶುಭಚಂದ್ರ, ರಾಜ್ಯ ಕಾರ್ಯದರ್ಶಿ ಎಸ್.ಜಿ.ಮಹೇಶ್ ವೆಬಿನಾರ್‍ನಲ್ಲಿ ಭಾಗವಹಿಸಿದ್ದರು.