ಸೋಮೇಶ್ವರ ವಿದ್ಯಾಲಯದಲ್ಲಿನ ಪುನಶ್ಚೇತನ ಕಾರ್ಯಕ್ರಮದಲ್ಲಿ ಆದರ್ಶ ಗೋಖಲೆ
ದಾವಣಗೆರೆ, ಫೆ.16- ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾ ಟಿಸಿದ ವಾಗ್ಮಿ, ಉಪನ್ಯಾಸಕ ಆದರ್ಶ ಗೋಖಲೆ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ನಿಮ್ಮೆಲ್ಲಾ ಸುಖವನ್ನು ಬದಿಗಿಟ್ಟು ಅಧ್ಯಯನ ಮಾಡಿದಾಗ ಮಾತ್ರ ಯಶಸ್ಸಿಗೆ ಹತ್ತಿರವಾಗುತ್ತೀರಿ ಎಂದು ಗೋಖಲೆ ವಿದ್ಯಾರ್ಥಿಗಳಿಗೆ ಹಿತ ನುಡಿ ದರು. ಜಗತ್ತನ್ನು ತಲ್ಲಣಗೊಳಿಸಿದ ಕೊರೊನಾ, ಓಮಿಕ್ರಾನ್ ಎಂಬ ಎರಡು ವೈರಸ್ ಇದೀಗ ನಿಶ್ಚಲಗೊಂಡಂತೆಯೇ ಆಗಿದೆ. ಆದರೆ, ಇದರ ಪರಿಣಾಮವಾಗಿ ವಿದ್ಯಾರ್ಥಿಗಳಲ್ಲಿ ಅಧ್ಯಯನ ವಿಚಾರವಾಗಿ ನಾಳೆ ಮಾಡೋಣ, ನನ್ನಿಂದಾಗದು ಎಂಬ ಮತ್ತೆರಡು ವೈರಸ್‌ಗಳು ಹುಟ್ಟಿವೆ ಅದಕ್ಕೆ ತಕ್ಷಣಕ್ಕೆ ವ್ಯಾಕ್ಸಿನ್ ಕಂಡುಕೊಳ್ಳಬೇಕು ಎಂದು ಮಾರ್ಮಿಕವಾಗಿ ವಿಶ್ಲೇಷಿಸಿದರು.
ಶಿಕ್ಷಕರನ್ನುದ್ದೇಶಿಸಿ ಮಾತಾಡಿದ ಗೋಖಲೆ ಅವರು `ಸಾಮಾನ್ಯ ನರನನ್ನು ನಾರಾಯಣ ನನ್ನಾಗಿಸುವ ಸಾಮರ್ಥ್ಯ ಶಿಕ್ಷಕರಿಗೆ ಮಾತ್ರ ಇರುವುದು’ ಎಂದರು. ಆನ್ಲೈನ್ ಶಿಕ್ಷಣದಿಂದ ಬಂದ ಮಕ್ಕಳ ಮನಸ್ಸನ್ನು ಮತ್ತೆ ಹಿಂದಿನಂತೆ ಹೊಂದಿಸಿಕೊಂಡು ಕಲಿಸುವ ಗುರು ತರ ಜವಾಬ್ಧಾರಿ ಶಿಕ್ಷಕರ ಮೇಲಿದೆ ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್, ಪ್ರಾಂಶುಪಾಲರಾದ ಪ್ರಭಾವತಿ, ವೀಣಾ, ಶೈಕ್ಷಣಿಕ ನಿರ್ದೇಶಕ ಪತ್ರೇಶ್, ಆಡಳಿತಾಧಿಕಾರಿ ಹರೀಶ್ ಬಾಬು ಹಾಜರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಶಿವಾನಂದ್ ಕರೂರ್ ಮಠ ನಿರೂಪಿಸಿದರು.