ಹರಪನಹಳ್ಳಿ : ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಪಿ.ಟಿ.ಭರತ್
ಹರಪನಹಳ್ಳಿ, ಫೆ. 16- ಲೋಕ ಕಲ್ಯಾಣಕ್ಕಾಗಿ ಭ್ರಾತೃತ್ವ, ಅಹಿಂಸೆ ಹಾಗೂ ಸತ್ಯವನ್ನು ಸಾರಲು ಜನ್ಮ ತಾಳಿದ ಮಹಾನ್ ಸಂತ ಸೇವಾಲಾಲ್ ಎಂದು ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಪಿ.ಟಿ.ಭರತ್ ಹೇಳಿದರು.
ಪಟ್ಟಣದ ಬಾಣಗೇರಿಯ ಕಾಂಗ್ರೆಸ್ ಕಚೇರಿಯಲ್ಲಿ ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಸಂತ ಶ್ರೀ ಸೇವಾಲಾಲ್ ಮಹಾರಾಜ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಮಾತನಾಡಿದರು.
ತಾಂಡಾಗಳಲ್ಲಿ ವಾಸಿಸುವ ಲಂಬಾಣಿಗರು ತಮ್ಮದೇ ಆದ ಸಾಂಸ್ಕೃತಿಕ ಪರಂಪರೆ ಹೊಂದಿದ್ದಾರೆ. ಆಧುನಿ ಕತೆಯ ಪ್ರಭಾವದಿಂದ ಭಾರತದ ಅನೇಕ ಬುಡಕಟ್ಟುಗಳು ತಮ್ಮ ಅನನ್ಯತೆ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಲಂಬಾಣಿ ಬುಡಕಟ್ಟು ತನ್ನ ಅನನ್ಯತೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದರು. ಉತ್ತರ ಭಾರತದ ರಾಜಸ್ಥಾನ ಮೂಲದ ಬಂಜಾರರು ಯಾವುದೋ ಕಾರಣದಿಂದ ದೇಶದ ಬೇರೆ ಬೇರೆ ಭಾಗಗಳಿಗೆ ಪಸರಿಸಿದ್ದು, ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ ಹಾಗೂ ಪರಂಪರೆಗಳನ್ನು ಕಾಪಾಡಿ ಕೊಂಡು ಬಂದಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಹಿಂದುಳಿದವರಾಗಿದ್ದರೂ ಸಾಹಿತ್ಯ, ಸಂಸ್ಕೃತಿ, ಕಲೆಗಳಿಗೆ ಬಂಜಾರರಲ್ಲಿ ಬರವಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಬಿ.ಪರಶುರಾಮಪ್ಪ ಮಾತನಾಡಿ, ಬಂಜಾರರು ಸಂತ ಶ್ರೀ ಸೇವಾಲಾಲ್ ಮಹಾರಾಜರ ಹೆಸರಿನಲ್ಲಿ ಮಾಲೆ ಧರಿಸಿಕೊಂಡು ಪಾದಯಾತ್ರೆ ವ್ರತವನ್ನು ಮಾಡುತ್ತಾ ಬಂಜಾರ್ ಭಜನೆ ಗಾಯನದ ಮೂಲಕ ಅನ್ಯಧರ್ಮೀಯ ಬಂಧುಗಳು ತಮ್ಮ ಸಂಸ್ಕೃತಿ, ಅಚಾರ, ವಿಚಾರವನ್ನು ಖುಷಿಯಿಂದ ಹಂಚಿಕೊಳ್ಳುತ್ತಾರೆ ಎಂದರು
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಿನಪ್ಪ, ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರೇಮ್ ಕುಮಾರ್, ಮುಖಂಡರಾದ ಶಶಿಧರ್ ಪೂಜಾರ್, ಹೆಚ್.ಕೆ. ಹಾಲೇಶ್, ತಿಮ್ಮಾನಾಯ್ಕ, ಪುರಸಭೆ ಸದಸ್ಯರಾದ ಜಾಕೀರ್ ಸರ್ಖಾವಸ್, ಭರತ್, ಗಿಡ್ಡಳ್ಳಿ ನಾಗರಾಜ್, ಕುಲುಮಿ ಅಬ್ದುಲ್, ಖುರ್ಷಿದ್ ಅಹಮದ್, ರಿಯಾಜ್ ಅಹ್ಮದ್, ಯುವ ಮುಖಂಡ ಟಿ. ಪ್ರವೀಣ್ ಕುಮಾರ್, ಟಿ. ಯರಿಸ್ವಾಮಿ, ಮಾಂತೇಶ್ ನಾಯ್ಕ, ಆರ್. ಮಂಜುನಾಥ್, ರಂಜಿತ್ ಪೂಜಾರ್ ಸೇರಿದಂತೆ, ಇತರರು ಇದ್ದರು.