ದಾವಣಗೆರೆ, ಫೆ. 16- ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ವಿಭಾಗದಲ್ಲಿ ನವಜಾತ ಶಿಶುಗಳ ಶ್ರವಣ ಪರೀಕ್ಷೆಗೆ ಅತ್ಯಾಧುನಿಕ ಯಂತ್ರಗಳು ಲಭ್ಯವಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಡಿ.ಎಸ್. ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜನಿಸುವ ಪ್ರತಿ ಸಾವಿರ ನವಜಾತ ಶಿಶುಗಳಲ್ಲಿ ಶೇ.2ರಷ್ಟು ಮಕ್ಕಳಲ್ಲಿ ಹುಟ್ಟುತ್ತಲೇ ಕಿವಿ ಕೇಳದಿರುವ ದೋಷವಿರುತ್ತದೆ. ಈ ಸಮಸ್ಯೆಯನ್ನು ಬೇಗ ಗುರುತಿಸದಿದ್ದರೆ ಮಕ್ಕಳು ಮಾತನಾಡಲು ಹಾಗೂ ಬೆಳವಣಿಗೆಗೆ ತೊಂದರೆಯಾಗುತ್ತದೆ. ಜನಿಸಿದ 1 ತಿಂಗಳ ನಂತರ ಶಿಶುಗಳ ಕಿವಿ ಕೇಳುವಿಕೆಯನ್ನು ಒಎಇ ಮತ್ತು ಬೇರಾ ಟೆಸ್ಟ್ ಮೂಲಕ ಖಚಿತ ಪಡಿಸಿಕೊಳ್ಳಬಹುದಾಗಿದೆ.
ವಿಡಿಯೋ ನಿಸ್ಟಾಗ್ಮೋಗ್ರಫಿ: ತಲೆ ಸುತ್ತುವಿಕೆ ಸಾಮಾನ್ಯ ಕಾರಣವಾಗಿದ್ದು, ಶೇ.90 ರಷ್ಟು ಜನರಲ್ಲಿ ಒಳಕಿವಿಯಲ್ಲಿನ ತೊಂದರೆಗೆ ತಲೆ ಸುತ್ತುವಿಕೆ ಕಂಡು ಬರುತ್ತಿದೆ. ನಿರ್ದಿಷ್ಟ ಕಾರಣ ಕಂಡು ಹಿಡಿದು ತಲೆ ಸುತ್ತುವಿಕೆಯನ್ನು ಗುಣಪಡಿಸಬಹುದಾಗಿದೆ. ವೀಡಿಯೋ ನಿಸ್ಟಾಗ್ಮೋಗ್ರಫಿ ಸಾಧನದಿಂದ ತಲೆಸುತ್ತುವಿಕೆಗೆ ನಿರ್ದಿಷ್ಟ ಕಾರಣ ಕಂಡುಹಿಡಿದು ಸೂಕ್ತ ಚಿಕಿತ್ಸೆ ನೀಡಬಹುದಾಗಿದೆ. ಈ ಪರೀಕ್ಷೆ ಆಸ್ಪತ್ರೆಯ ಒಪಿಡಿ ವಿಭಾಗದ ರೂಂ. ನಂ.11ರಲ್ಲಿ ಲಭ್ಯವಿರುವುದಾಗಿ ಅವರು ಹೇಳಿದರು.
ಅಲರ್ಜಿ ವಿಶೇಷ ತಪಾಸಣೆ ಚಿಕಿತ್ಸೆ: ಶೇ.33ರಷ್ಟು ಜನರು ಅಲರ್ಜಿ ಹಾಗೂ ಅದರ ರೋಗಗಳಾದ ಒಣ ಕೆಮ್ಮು, ನೆಗಡಿ, ಅಸ್ತಮಾ, ಮೈ ತುರಿಕೆ, ಮುಖ, ತುಟಿ ಊತ, ಮೈ ಮೇಲೆ ಕೆಂಪು ಗುಳ್ಳೆಗಳು, ಹೊಟ್ಟೆ ನೋವು, ವಾಂತಿಯಿಂದ ಬಳಲುತ್ತಿದ್ದಾರೆ. ಅಲರ್ಜಿ ಬಗ್ಗೆ ಜಾಗ್ರತೆ ಹಾಗೂ ಸರಿಯಾದ ಪರೀಕ್ಷೆ ಅವಶ್ಯವಾಗಿದ್ದು, ಕಿವಿ, ಮೂಗು ಹಾಗೂ ಗಂಟಲು ವಿಭಾಗದ ನುರಿತ ವೈದ್ಯರ ತಂಡವು ಅಲರ್ಜಿಗೆ ಮೂಲ ಕಾರಣವಾದ ಅಲರ್ಜನ್ ಪದಾರ್ಥ ಪತ್ತೆ ಹಚ್ಚುವ ಸ್ಕಿನ್ ಪ್ರಿಕ್ ಟೆಸ್ಟ್ ಎಂಬ ಪರೀಕ್ಷೆ ನಡೆಸಿ, ಚಿಕಿತ್ಸೆ ನೀಡುತ್ತಿದೆ ಎಂದು ಹೇಳಿದರು.
ಚರ್ಮ ರೋಗಕ್ಕೆ ಲೇಸರ್ ಚಿಕಿತ್ಸೆ: ಬಾಪೂಜಿ ಆಸ್ಪತ್ರೆಯ ಚರ್ಮ ರೋಗ ವಿಭಾಗದಲ್ಲಿ ನಾಲ್ಕು ಬಗೆಯ ಲೇಸರ್ ಯಂತ್ರಗಳನ್ನು ಅಳವಡಿಸಲಾಗಿದ್ದು, ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಸೂಗಾರೆಡ್ಡಿ ಹೇಳಿದ್ದಾರೆ.
ಹೆಣ್ಣು ಮಕ್ಕಳಲ್ಲಿ ಕೆೆನ್ನೆ, ಗದ್ದ, ಮೇಲ್ತುಟಿ ಮೇಲೆ ಅನಾವಶ್ಯಕವಾಗಿ ಕೂದಲು ಬೆಳೆದಿರುವುದನ್ನು ತೆಗೆಯಲು ಡಯೋಡ್ ಲೇಸರ್ ಚಿಕಿತ್ಸೆ. ಮೊಡವೆಯ ಗಾಯಗಳನ್ನು ತೆಗೆಯಲು, ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡಲು, ಚರ್ಮ ಮರುಕಳಿಸುವಿಕೆಗೆ ಪ್ರಾಕ್ಷನಲ್ ಲೇಸರ್ ಯಂತ್ರ. ಹಚ್ಚೆ (ಟ್ಯಾಟೂ) ಹುಟ್ಟು ಮಚ್ಚೆಗಳನ್ನು ತೆಗೆಯಲು ಕ್ಯೂಸ್ವಿಚ್ಡ್ ಯಂತ್ರ ಲಭ್ಯವಿದೆ. ತೊನ್ನು, ಸೋರಿಯಾಸಿಸ್, ಅಲೋಫೆಷಿಯಾ ಎರಿಯಾಟ ಸಮಸ್ಯೆಗೆ ಎಕ್ಸೈಮರ್ ಲೇಸರ್ ಯಂತ್ರದ ಮೂಲಕ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಲೇಸರ್ ಕಿರಣಗಳು ರೋಗ ಇದ್ದ ಜಾಗಕ್ಕೆ ಬಿದ್ದಾಗ ಅಲ್ಲಿರುವ ಜಾವಿಕೋಳಗಳ ಮೇಲೆ ತನ್ನ ಪರಿಣಾಮ ಬೀರುತ್ತದೆ. ಆದ್ದರಿಂದ ಲೇಸರ್ ತುಂಬಾ ಪ್ರಶಂಸೆ ಪಡೆಯುತ್ತಿದೆ. ಇದೊಂದು ಸರಳ ವಿಧಾನವಾಗಿದ್ದು, ಮದ್ದಿಲ್ಲದ ಕಾಯಿಲೆ ಗಳಿಗೂ ಈ ಚಿಕಿತ್ಸೆ ಮದ್ದಾಗಿರುವ ಕಾರಣ ಲೇಸರ್ ಅತ್ಯಾಧುನಿಕ ದಿನಗಳಲ್ಲಿ ತುಂಬಾ ಉಪಯೋಗವಾಗಿದೆ ಎಂದು ಹೇಳಿದರು.
ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಬಿ. ಮುರುಗೇಶ್, ಡಾ.ಕೆ.ಬಿ. ಬಸವರಾಜ್, ಡಾ.ಪ್ರಶಾಂತ್, ಡಾ. ಚೈತನ್ಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.