ಹರಿಹರೇಶ್ವರ ರಥೋತ್ಸವ ವಿಷಯದಲ್ಲಿ ಜಿಲ್ಲಾಧಿಕಾರಿ ತುಘಲಕ್ ದರ್ಬಾರ್ : ಶಾಸಕರ ಅಸಮಾಧಾನ
ಹರಿಹರ, ಫೆ. 16 – ನಗರದ ಗ್ರಾಮದೇವತೆ ಊರಮ್ಮ ದೇವಿಯ ಹಬ್ಬವನ್ನು ಬರುವ ಮಾರ್ಚ್ 22 ರಿಂದ 26 ರವರೆಗೆ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಸಡಗರ, ಸಂಭ್ರಮ ದಿಂದ ಆಚರಿಸಲಾಗುತ್ತದೆ. ಸಾರ್ವಜನಿಕ ರಲ್ಲಿ ಯಾವುದೇ ಗೊಂದಲ ಬೇಡ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹಬ್ಬದ ಆಚರಣೆ ಬಗ್ಗೆ ಈಗಾಗಲೇ ಎಲ್ಲಾ ಪೂರ್ವ ಸಿದ್ದತೆ ಮಾಡಲಾಗುತ್ತಿದೆ. ಕಸಬಾ ಮತ್ತು ಮಾಜೇನಹಳ್ಳಿ ಗ್ರಾಮದಲ್ಲಿನ ಭಕ್ತರ ಮನೆಗಳಿಗೆ ದೇವಿಯ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಪೂಜಾ ಕಾರ್ಯಗಳನ್ನು ಮಾಡಲಾಗಿದೆ ಎಂದರು.
ಬರುವ ಶುಕ್ರವಾರ ಬೆಳಗ್ಗೆ 12 ಕ್ಕೆ ಹಂದರಗಂಬ ಪೂಜೆ ಮಾಡಲಾಗುತ್ತದೆ. ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಸಿಲುಕ ಬಾರದು ಎಂದವರು ತಿಳಿಸಿದರು.
ಹಬ್ಬದ ಆಚರಣೆ ವಿಚಾರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪನವರೊಂದಿಗೆ ಚರ್ಚೆ ಕೂಡ ಮಾಡಲಾಗಿದೆ. ಅವರು ಸಮ್ಮತಿಸುವ ವಿಶ್ವಾಸವಿದೆ. ಹಾಗಾಗಿ ಗ್ರಾಮದೇವತೆ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಹೇಳಿದರು.
ಹಬ್ಬದ ಆಚರಣೆ ವೇಳೆ ಕುಸ್ತಿ, ಎತ್ತಿನ ಬಂಡಿ ಓಟ, ಬೆಲ್ಲದ ಬಂಡಿ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡೆಗಳನ್ನೂ ಸಹ ನಡೆಸಲಾಗುತ್ತದೆ ಎಂದರು.
ಹರಿಹರೇಶ್ವರ ರಥೋತ್ಸವ ಆಚರಣೆಗೆ ತಹಶೀಲ್ದಾರರ್ ಮತ್ತು ಜಿಲ್ಲಾಧಿವಕಾರಿಗಳು 144ನೇ ಸೆಕ್ಷನ್ ನೆಪ ಮಾಡಿಕೊಂಡು ಹರಿಹರೇಶ್ವರ ರಥೋತ್ಸವವ ಬೆಳಗಿನ ಜಾವ 5.20ಕ್ಕೆ ಮೂರು ಹೆಜ್ಜೆಗಳನ್ನು ಹಾಕಿಸಿ ರಥೋತ್ಸವ ನಡೆಯದಂತೆ ಮಾಡಿದ್ದಾರೆ. ಇದ ರಿಂದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪನವರ ಮೇಲೆ ನಗರದ ಜನತೆ ಅಸಮಾಧಾನ ಹೊಂದಿದ್ದಾರೆ. ಜಿಲ್ಲಾಧಿಕಾರಿಗಳು ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ. ಅವರ ವರ್ತನೆಯ ಬಗ್ಗೆ ನಾನು ವಿಧಾನಸಭೆ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ, ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಉತ್ಸವ ಸಮಿತಿಯ ಅಧ್ಯಕ್ಷ ಕೆ. ಅಣ್ಣಪ್ಪ , ಕಾರ್ಯದರ್ಶಿ ಬೆಣ್ಣೆ ರೇವಣಸಿದ್ದಪ್ಪ, ಖಜಾಂಚಿ ಶೇರಾಪುರ ರಾಜಪ್ಪ, ಸಹ ಕಾರ್ಯದರ್ಶಿ ಪಾಲಾಕ್ಷ, ನಗರಸಭೆಯ ಮಾಜಿ ಅಧ್ಯಕ್ಷ ಬಿ.ರೇವಣಸಿದ್ದಪ್ಪ, ನಗರಸಭೆ ಸದಸ್ಯ ಶಂಕರ್ ಖಟಾವ್ಕರ್, ಕೆ.ಬಿ. ರಾಜಶೇಖರ, ಹಳ್ಳದಕೇರಿ ನಿಜಗುಣ, ಗೀರೀಶ್ ಗೌಡ್ರು, ಹಂಚಿನ ನಾಗರಾಜಪ್ಪ, ನಾಗರಾಜ್ ಮೆಹರ್ವಾಡೆ, ಬಸವರಾಜಪ್ಪ, ಕಾಂತರಾಜ್ ಮತ್ತಿತರರು ಉಪಸ್ಥಿತರಿದ್ದರು.