ಚಿತ್ರದುರ್ಗ ಫೆ. 16- ಭರಮಸಾಗರದ ಹತ್ತಿರವಿರುವ ಭರಮಣ್ಣ ನಾಯಕನ ಕೆರೆಗೆ ಡಾ. ಶಿವಮೂರ್ತಿ ಮುರುಘಾ ಶರಣರು ಭೇಟಿ ನೀಡಿ ಬಿರುಕು ಬಿಟ್ಟಿರುವ ಕೆರೆಯ ಏರಿಯನ್ನು ಪರಿಶೀಲಿಸಿದರು.
ಅನೇಕ ವರ್ಷಗಳಿಂದ ಖಾಲಿ ಇದ್ದ ಕೆರೆಗೆ ಈಗ ನೀರು ತುಂಬಿಸಿರುವುದು ಅತ್ಯಂತ ಶ್ಲ್ಯಾಘನೀಯ. ಆದರೆ ಕೆರೆ ಬಿರುಕು ಬಿಟ್ಟಿರುವುದು ನಮಗೆಲ್ಲ ದೊಡ್ಡ ಸಂದೇಶವನ್ನು ಕೊಡುತ್ತದೆ. ಬಿರುಕು ಬಿಡುವುದು ಸಾಮಾನ್ಯ. ಆದರೆ ಕೆರೆಗೆ ನೀರು ತುಂಬಿಸುವಾಗ ತಜ್ಞರ ಸಲಹೆ, ಸೂಚನೆ ಪಡೆಯುವುದು ಸೂಕ್ತ ಎಂದು ಶರಣರು ತಿಳಿಸಿದರು.
ಜನರು ಕೆರೆ ತುಂಬಿದೆ ಎನ್ನುತ್ತಾರೆ. ಕೆರೆ ಏರಿ ಹೇಗಿದೆ ಎಂದು ನೋಡುವುದಿಲ್ಲ. ಇದು ನಮಗೂ, ನಿಮಗೂ, ಸರ್ಕಾರಕ್ಕೂ, ಸಂಘ-ಸಂಸ್ಥೆಗಳಿಗೆ ದೊಡ್ಡ ಅನುಭವ. ಏನೇ ಆಗಲಿ ದುರಸ್ತಿ ಕಾರ್ಯವು ಭರದಿಂದ ಸಾಗಿರುವುದು ಸಂತೋಷವನ್ನು ತಂದಿದೆ ಎಂದು ಶರಣರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೆಬ್ಬಾಳು ರುದ್ರೇಶ್ವರ ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ, ಮುಖಂಡರಾದ ಎಸ್.ಎಂ.ಎಲ್. ತಿಪ್ಪೇಸ್ವಾಮಿ, ಡಿ.ವಿ. ಶರಣಪ್ಪ, ಎ.ಜೆ. ಪರಮಶಿವಯ್ಯ, ಶೈಲೇಶ್, ಶಿವಬಸಯ್ಯ, ಡಿ.ವಿ.ಎಸ್. ಪ್ರದೀಪ್, ಪ್ರವೀಣ್, ಎಸ್.ಎಂ.ಎಲ್. ಕಿರಣ್, ಕೋಗುಂಡೆ ಮಂಜಣ್ಣ, ತೀರ್ಥಪ್ಪ, ನಾಗೇಂದ್ರಪ್ಪ, ಕೃಷ್ಣಮೂರ್ತಿ, ಕಲ್ಲೇಶ್, ತುರುವನೂರು ಚನ್ನೇಶ್ ಮತ್ತಿತರರಿದ್ದರು.