ಧರ್ಮದಲ್ಲಿ ರಾಜಕೀಯ ಬೆರೆಸಬಾರದು

ಶ್ರೀ ವೀರಭದ್ರೇಶ್ವರ ಸ್ವಾಮಿ  ಮೂರ್ತಿಯ 22ನೇ ವರ್ಷದ ವಾರ್ಷಿಕ ಮಹೋತ್ಸವದಲ್ಲಿ ಆವರಗೊಳ್ಳದ ಶ್ರೀಗಳ ಕಳಕಳಿ

ದಾವಣಗೆರೆ, ಫೆ.16- ಧರ್ಮದಲ್ಲಿ ರಾಜಕೀಯ ಬೆರೆಸಬಾರದು. ಇದರಿಂದ ಸಮಾಜಕ್ಕೆ ಧಕ್ಕೆಯಾಗುತ್ತದೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಹುಬ್ಬಳ್ಳಿ ಚೌಡಪ್ಪನ ಗಲ್ಲಿಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ  ಮೂರ್ತಿಯ 22ನೇ ವರ್ಷದ ವಾರ್ಷಿಕ ಮಹೋತ್ಸವ ಹಾಗೂ ಧರ್ಮಾಧಿಕಾರಿ ಲಿಂ|| ಶ್ರೀಮತಿ ಗುರುಬಾಯಮ್ಮನವರ 7ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಶ್ರೀಗಳು ಆಶೀರ್ವಚನ ನೀಡಿದರು.

ದೇವರ ಹೆಸರಿನಲ್ಲಿ ಮುಖವಾಡ ಹಾಕಿಕೊಂಡು ಹಣ ಮಾಡುವವರನ್ನು ನೋಡಿದ್ದೇವೆ. ಆದರೆ, ಇಲ್ಲಿ ನಿಷ್ಕಲ್ಮಶ ಮನಸ್ಸಿನಿಂದ ಭಕ್ತರು ತಮ್ಮ ಕೈಲಾದಷ್ಟು ನಿರಾಪೇಕ್ಷೆಯಿಂದ ಶ್ರದ್ಧಾ – ಭಕ್ತಿಯಿಂದ ಶ್ರೀ ಸ್ವಾಮಿಯ ಆರಾಧನೆ ಮೂಲಕ ಸ್ಮರಿಸುತ್ತಿರುವುದು ಶ್ಲ್ಯಾಘನೀಯ ಎಂದರು.

ಧರ್ಮ ಮಾರ್ಗದಲ್ಲಿ ಮಾನವ ನಡೆಯುವುದರ ಮೂಲಕ ಧರ್ಮದ ಮೌಲ್ಯಗಳನ್ನು ಬೆಳೆಸಿಕೊಂಡು ಧರ್ಮದ ಚೌಕಟ್ಟಿನಲ್ಲಿ ನಡೆದು ಭಗವಂತನಿಗೆ ತಮ್ಮ ಪ್ರಾರ್ಥನೆಯನ್ನು ಸಲ್ಲಿಸಬೇಕೇ ಹೊರತು, ಧರ್ಮವನ್ನು ವೈಭವೀಕರಿಸಬಾರದು. ಮಠ, ಮಂದಿರ, ಮಸೀದಿ, ಚರ್ಚ್‌ಗಳ ಮೂಲಕ ತಮ್ಮ ಧರ್ಮದ ಆಚರಣೆಯನ್ನು ಮನೆಯಲ್ಲಿಟ್ಟುಕೊಂಡು ಸಂಸ್ಕಾರವಂತರಾಗಿ, ಸಾಮಾಜಿಕ ಜೀವನದಲ್ಲಿ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ನಡೆಯಬೇಕು ಎಂದು ತಿಳಿಸಿದರು.

ದುಷ್ಟರ ಶಿಕ್ಷಕ, ಶಿಷ್ಟರ ರಕ್ಷಕ ಶ್ರೀ ವೀರಭದ್ರೇಶ್ವರ ಸ್ವಾಮಿ ನಿಜವಾದ ಧರ್ಮ ಆಚರಣೆಯ ರಕ್ಷಕ. ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮನುಷ್ಯ ಜೀವನದಲ್ಲಿ ಯಶಸ್ವಿಯಾಗುತ್ತಾನೆ. ಉಜ್ವಲವಾದ ಭವಿಷ್ಯದಲ್ಲಿ ಒಳ್ಳೆಯ ಫಲಗಳನ್ನು ಪಡೆಯುತ್ತಾರೆ ಎಂದರು.

ಮತ್ತಿಹಳ್ಳಿ ರೈಸ್ ಮಿಲ್ ಮಾಲೀಕ ಮತ್ತಿಹಳ್ಳಿ ಸಂತೋಷ್‌, ಎಪಿಎಂಸಿ ಮಾಜಿ ಸದಸ್ಯ ಎನ್.ಅಡಿವೆಪ್ಪ, ಐಶ್ವರ್ಯ ಟ್ರೇಡರ್ಸ್ ಕೊಟ್ರೇಶ್, ವೀರಪ್ಪ ಬಿಜ್ಜೂರು, ಲಿಂಗರಾಜ್ ಹೊಳಬಸಯ್ಯ, ಹರಿಹರ ನಗರಸಭೆ ಸಹಾಯಕ ಇಂಜಿನಿಯರ್ ಎಸ್.ಎಸ್.ಬಿರಾದಾರ್, ವೀರಭದ್ರೇಶ್ವರ ಸ್ವಾಮಿ, ಬೇವಿನ ಹಳ್ಳಿ ಹಾಲೇಶ್, ಕದರಮಂಡಲಗಿ ವೀರಪ್ಪಾಜಿ, ಕರಿಬಸಪ್ಪ ಬಿಜ್ಜೂರ, ಮುಂತಾದವರು ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ವೀರಪ್ಪ ಬಾವಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!