ಕುತೂಹಲವೇ ಜೀವನಕ್ಕೆ ಸ್ಫೂರ್ತಿ

ವಿಜ್ಞಾನ ಗೋಷ್ಠಿ ಕಾರ್ಯಕ್ರಮದಲ್ಲಿ ತರಳಬಾಳು ಸ್ವಾಮೀಜಿ

ಸಿರಿಗೆರೆ, ಫೆ.15-  ವಿಜ್ಞಾನದಿಂದಲೇ ನಮಗೆ ಪಾಣಿನಿ ತಂತ್ರಾಂಶ ರೂಪಿಸಲು ಸಾಧ್ಯವಾಯಿತು. ಇದನ್ನು ನಾವು 1994 ರಲ್ಲಿ ರೂಪಿಸಿದೆವು. ಇದು 8 ಅಧ್ಯಾಯಗಳನ್ನು ಹಾಗೂ 4000 ತಂತ್ರಾಂಶಗಳನ್ನು ಒಳಗೊಂಡಿದೆ. ಒಂದು ಭಾಷೆಯ ವ್ಯಾಕರಣವನ್ನು ಈ ರೀತಿಯಲ್ಲಿ ವಿವರಿಸುವ ಮತ್ತೊಂದು ಕೃತಿಯು ವಿಶ್ವದ ಯಾವುದೇ ಇತರೆ ಭಾಷೆಗಳಲ್ಲಿ ಕಂಡುಬರುವುದಿಲ್ಲ. ತರ್ಕಬದ್ಧವಾದ ಈ ಕೃತಿಯನ್ನು ಕಂಪ್ಯೂಟರ್‍ಗೆ ಅಳವಡಿಸಿರುವುದು ವಿಶಿಷ್ಟ ಮತ್ತು ಸಮಂಜಸ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಇಲ್ಲಿನ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ತರಳಬಾಳು ಹುಣ್ಣಿಮೆಯ ಪ್ರಯುಕ್ತ ಎರಡನೇ ದಿನ ನಡೆದ ವಿಜ್ಞಾನ ಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಕೇವಲ ಸಂಸ್ಕತ ಭಾಷೆಗೆ ಸೀಮಿತವಾಗಿರದೆ ಕನ್ನಡದಲ್ಲೂ ಸಹ ಶಿವ ಸಾಫ್ಟ್‌ವೇರ್ ಮೂಲಕ ಕನ್ನಡದಲ್ಲಿ ಎಲ್ಲ ಶರಣರ ಹೆಸರುಗಳು ಹಾಗೂ ವಚನಗಳನ್ನು ಒಳಗೊಂಡಂತಹ `ಗಣಕ ವಚನ ಸಂಪುಟ’ ತಂತ್ರಾಂಶ  ರೂಪಿಸಿದ್ದೇವೆ. ಪ್ರಾಚೀನ ಜ್ಞಾನದ ಜೊತೆಗೆ ಆಧುನಿಕ ವಿಜ್ಞಾನ ಸೇರಿ ಈ ತಂತ್ರಜ್ಞಾನ ರೂಪಿಸಲು ಸಾಧ್ಯವಾಯಿತು ಎಂದು ತಿಳಿಸಿದರು. 

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಧಾರವಾಡದ ಮಹೇಶ್ ಮಾಸಾಳ್, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಎಂಬ ವಿಷಯದ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಿ ಹಾಗೂ ನಿಮಗೆ ಜೀವನದಲ್ಲಿ  ಏನನ್ನಾದರೂ ಸಾಧಿಸುವ ಹುಚ್ಚು, ಕಿಚ್ಚು ಇರಬೇಕು ಎಂದು ತಿಳಿಸಿದರು.

ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಡಾ. ಎಸ್.ಎಮ್.  ಶಿವಪ್ರಸಾದ್,  ವಿಜ್ಞಾನ ಕಲಿಕೆಯ ವಿಸ್ಮಯ ಎಂಬ ವಿಷಯದ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಲ್ಪನಾಶಕ್ತಿ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಾಧಿಸುವ ಹಂಬಲ ಇರಬೇಕು. ಶಿಕ್ಷಕರಿಗೆ ಪ್ರಶ್ನೆ ಕೇಳುವ ಸಾಮರ್ಥ್ಯ ವಿದ್ಯಾರ್ಥಿಗಳಿಗೆ ಇರಬೇಕು ಎಂದು ಕಿವಿ ಮಾತು ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸದಸ್ಯ ಎಚ್.ಎಸ್.ಟಿ.ಸ್ವಾಮಿ ಮಾತನಾಡಿ, ಪ್ರತಿಯೊಬ್ಬರೂ ವೈಜ್ಞಾನಿಕ ಆಲೋಚನಾ ಕ್ರಮಗಳನ್ನು ರೂಢಿಸಿಕೊಂಡರೆ ನಮ್ಮ ಬದುಕು ಯಶಸ್ಸಿನತ್ತ ಸಾಗುತ್ತದೆ ಎಂದರು. ಪ್ರೊ. ಎಸ್.ಬಿ. ರಂಗನಾಥ್, ಡಾ. ಹೆಚ್.ವಿ. ವಾಮದೇವಪ್ಪ ಉಪಸ್ಥಿತರಿದ್ದರು.

error: Content is protected !!