ಪಂಚಮಸಾಲಿ,ಪಟ್ಟಸಾಲಿ, ಕುರುಬರು ಸ್ಥಿತಿವಂತರಿದ್ದಾರೆ…

ಅಡ್ವಾನ್ಸ್ ಕಾಮಗಾರಿ ದಿನಚರಿ ಆಗಬಾರ್ದು….

ಮಂತ್ರಿಗಳು ಬರುವಾಗ, ರಾಷ್ಟ್ರೀಯ ಹಬ್ಬಗಳ ಸಂದರ್ಭಗಳಲ್ಲಿ  ಅಧ್ಯಕ್ಷರು ತಮ್ಮ ಅಧಿಕಾರ ಪ್ರಯೋಗಿಸಿ ಅವಶ್ಯ ಕಾಮಗಾರಿಗಳನ್ನು ಮಾಡಿಸಬಹುದು. ಆದರೆ ಅದೇ ದಿನಚರಿ ಆಗಬಾರದು ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಅವರು, ಶೇಕಡಾ 90ರಷ್ಟಿದ್ದ  ಕೌನ್ಸಿಲ್ ಮಂಜೂರಾತಿ ನಿರೀಕ್ಷಿಸಿದ ಇಂದಿನ ಸಭೆಯ ವಿಷಯಗಳ ಪಟ್ಟಿಯನ್ನು ಉಲ್ಲೇಖಿಸಿ ಕಡಕ ಮಾತುಗಳಲ್ಲಿ ಕುಟುಕಿದರು. 

ರಾಣೇಬೆನ್ನೂರು, ಫೆ.15-  ಪಟ್ಟಸಾಲಿ, ಪಂಚಮಸಾಲಿ ಹಾಗೂ ಕುರುಬ ಈ ಮೂರು ಸಮಾಜದವರು ಒಂದೇ ಸರ್ವೆ ನಂಬರ್ ನಿವೇಶನ ಕೇಳಿದ್ದಾರೆ. ಆದ್ಯತೆ ಮೇಲೆ ಯಾರಿಗಾದರೂ ಕೊಡಿ ಎಂದ ನಗರಸಭಾ ಕಾಂಗ್ರೆಸ್ ಸದಸ್ಯ ನಿಂಗರಾಜ ಕೋಡಿಹಳ್ಳಿ ಅವರು, ಈ ಮೂರೂ ಸಮಾಜದವರು ಸ್ಥಿತಿವಂತರಿದ್ದಾರೆ. ದುಡ್ಡು ಕೊಟ್ಟು ಖರೀದಿ ಮಾಡುವ ಶಕ್ತಿ ಇವರಿಗಿದೆ. ಇವರನ್ನ ಹೊರತುಪಡಿಸಿ, ಇತರೆ ಬಡ ಸಮಾಜದವರಿಗೆ ಆ ನಿವೇಶನ ಕೊಡಿ ಎಂದು ಬಲವಾಗಿ ಪ್ರತಿಪಾದಿಸಿದರು.

ಇಂದು ನಡೆದ ನಗರಸಭೆ ಅಧಿವೇಶನದಲ್ಲಿ ಹಿಂದಿನ ಸಭೆ ಠರಾವುಗಳನ್ನು ಓದಿ ದೃಢೀಕರಿಸುವ ವಿಷಯ ಕುರಿತು ಸದಸ್ಯ ನಿಂಗರಾಜ ಮಾತನಾಡುತ್ತಿದ್ದರು.

ಎಲ್ಲ ರೀತಿಯಲ್ಲೂ ವಿಚಾರ ಮಾಡಿ ಪಟ್ಟಸಾಲಿ ಸಮಾಜದವರಿಗೆ ನಿವೇಶನ ಕೊಡಲಾಗಿದೆ ಎಂದು ಅಧ್ಯಕ್ಷರು ಪ್ರಕಟಿಸಿದ್ದು ಕೇಳಿಬಂದಿತು.

ಟೆಂಡರ್‌ಗಳಲ್ಲಿ ಕಡಿಮೆ ದರ ಹಾಕಿದವರನ್ನ ಬಿಟ್ಟು, ಕೆಲಸ ಮಾಡಲಾಗದಂತಹ ನಿಮಗೆ ಬೇಕಾದವರಿಗೆ ಕೆಲಸ ಕೊಟ್ಟಿದ್ದೀರಿ ಎಂದು ಆರೋಪಿಸಿದ ಸದಸ್ಯ ನಿಂಗರಾಜ ಅವರು, ಇದರ ಪಾರದರ್ಶಕತೆ ಪರೀಕ್ಷಿಸಲು ಈ ಕಡತವನ್ನು ಜಿಲ್ಲಾಧಿಕಾರಿಗಳ ಬಳಿ ಇರುವ  ಅಭಿಯಂತರರಿಗೆ ಕಳಸಿರಿ ಎಂದು ಬಿಗಿ ನಿಲುವು ತಳೆದರು. ಆಗ ಬಿಜೆಪಿ ಸದಸ್ಯರಾದ ಪ್ರಕಾಶ ಬುರಡಿಕಟ್ಟಿ, ಪ್ರಕಾಶ ಪೂಜಾರ, ಮಲ್ಲಿಕಾರ್ಜುನ ಅಂಗಡಿ ಅವರು, ಬೇಕಾದವರಿಗೆ ಅಲ್ಲ ಕೆಲಸ ಮಾಡುವವರಿಗೆ ಕಾನೂನುರೀತ್ಯಾ ಕೊಡಲಾಗಿದೆ ಎಂದು ಆರೋಪದ ವಿರುದ್ದ ಅಧ್ಯಕ್ಷರ ಪರವಾಗಿ ಬ್ಯಾಟಿಂಗ್ ಮಾಡಿದಾಗ ಸದಸ್ಯರ ಮಧ್ಯ ಮಾತಿನ ಚಕಮಕಿ ನಡೆಯಿತು.

ಅಲ್ಲಿ ನಡೆದ ಕಾಮಗಾರಿಗಳ ನೈಪುಣ್ಯತೆ, ಭದ್ರತೆ ಮುಂತಾದವುಗಳ ಬಗ್ಗೆ ನಗರಸಭೆ ಅಭಿಯಂತರ ವಿಭಾಗವು ಪರೀಶೀಲನೆ ನಡೆಸಿ,   ವಿವಿಧ ಸರ್ವೆ ನಂಬರ್‌ಗಳ ವಿನ್ಯಾಸಗಳಲ್ಲಿ ಮಾಡಲಾದ ಸಿವಿಲ್ ಅಭಿವೃದ್ಧಿ ಕಾಮಗಾರಿಗಳಿಗೆ ಮುಕ್ತಾಯ ಪ್ರಮಾಣ ಪತ್ರಗಳನ್ನು  ಕೊಡುವಂತೆ ಸದಸ್ಯರಾದ ಶೇಖಪ್ಪ ಹೊಸಗೌಡ್ರ, ಪುಟ್ಟಪ್ಪ ಮರಿಯಮ್ಮನವರ, ನಿಂಗರಾಜ ಕೋಡಿಹಳ್ಳಿ  ಮತ್ತಿತರರು ಸಲಹೆ ನೀಡಿದರು.

ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರ ಆರೋಪ, ಅಹವಾಲುಗಳಿಗೆ ಪೌರಾಯುಕ್ತ ಉದಯಕುಮಾರ, ಹಿರಿಯ ಅಭಿಯಂತರ ಎಂ.ಆರ್. ಗಿರಡ್ಡಿ ಅವರು ವಿವರಣೆ ನೀಡಿದರು. ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ ವೇದಿಕೆಯಲ್ಲಿದ್ದರು.

error: Content is protected !!