ದಾವಣಗೆರೆ, ಫೆ. 14- ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಿಂದ ಸ್ಥಗಿತಗೊಂಡಿದ್ದ ಒಂಭತ್ತು ಹಾಗೂ ಹತ್ತನೇ ತರಗತಿಗಳು ಸೋಮವಾರ ಪುನರಾರಂಭಗೊಂಡವು.
ಆರಂಭದಲ್ಲಿ ಆತಂಕದಲ್ಲಿಯೇ ಆರಂಭವಾದ ತರಗತಿಗಳು, ನಂತರ ಯಾವುದೇ ವಿವಾದಗಳಿಗೆ ಆಸ್ಪದ ನೀಡದೆ ನಿರಾತಂಕವಾಗಿ ನಡೆದವು.
ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಆಗಮಿಸಿದ್ದರಾದರೂ, ನ್ಯಾಯಾಲಯದ ಆದೇಶವಿದ್ದ ಹಿನ್ನೆಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನವೊಲಿಸಿ ಹಿಜಾಬ್ ತೆಗೆಸುವಲ್ಲಿ ಸಫಲರಾದರು. ಶಿಕ್ಷಕರ ಸೂಚನೆ ಮೇರೆಗೆ ವಿದ್ಯಾರ್ಥಿಗಳು ಹಿಜಾಬ್ ತೆಗೆದು ಪಾಠಕ್ಕೆ ಹಾಜರಾದರು.
ನಗರದ ಸೀತಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ಪ್ರತ್ಯೇಕ ಕೊಠಡಿಗೆ ತೆರಳಿ ಹಿಜಾಬ್ ತೆಗೆದು ತರಗತಿಗೆ ಹಾಜರಾದರು.
ಮಧ್ಯಾಹ್ನ ಸೀತಮ್ಮ ಪ್ರಥಮ ದರ್ಜೆ ಕಾಲೇಜು ಹಾಗೂ ಮೋತಿ ವೀರಪ್ಪ ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ ಪರಿಶೀಲಿಸಿದರು.
ಯಾವುದೇ ಕಾರಣಕ್ಕೂ ಧೈರ್ಯಗೆಡಬೇಡಿ. ಇಡೀ ಜಿಲ್ಲಾಡಳಿತ ನಿಮ್ಮೊಂದಿಗಿದ್ದು, ಉತ್ತಮವಾಗಿ ಓದಿ. ಎಸ್ಸೆಸ್ಸೆಲ್ಸಿಗೇ ಶಿಕ್ಷಣ ಮೊಟಕುಗೊಳಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ, ಬಿಇಒ ಹಾಗೂ ಶಾಲಾ ಶಿಕ್ಷಕರು ಈ ವೇಳೆ ಉಪಸ್ಥಿತರಿದ್ದರು.
ಮೋತಿ ವೀರಪ್ಪ ಕಾಲೇಜಿನಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಯ ಇಂಗ್ಲಿಷ್ ವಿಷಯಕ್ಕೆ ಪರೀಕ್ಷೆ ನಡೆಯುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸರಳ ಪ್ರಶ್ನೆಗಳಿಗೂ ವಿದ್ಯಾರ್ಥಿಗಳಿಗೆ ಉತ್ತರ ಬರೆಯಲಾಗುತ್ತಿಲ್ಲ. ಇಂಗ್ಲಿಷ್ ಶಿಕ್ಷಕರು ಸರಿಯಾಗಿ ಪಾಠ ಮಾಡಿಲ್ಲ. ಆದ್ದರಿಂದ ಅವರಿಗೆ ನೋಟೀಸ್ ನೀಡಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಇಂಗ್ಲಿಷ್ ಮತ್ತು ಗಣಿತ ವಿಷಯಗಳಿಗೆ ವಿಶೇಷ ತರಗತಿ ನಡೆಸುವಂತೆಯೂ ಸೂಚಿಸಿದರು.
ಎಸ್ಪಿ ಭೇಟಿ ಪರಿಶೀಲನೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಜಿಲ್ಲೆಯ ಕೆಲ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿವೈಎಸ್ಪಿ ಬಸವರಾಜ ಬಿ.ಎಸ್., ಎಸಿಪಿ ಸತೀಶ್ ಕುಮಾರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. ಅಲ್ಲದೆ ಯಾವುದೇ ತುರ್ತು ಸೇವೆಗಾಗಿ ಸಹಾಯವಾಣಿ 112ಕ್ಕೆ ಕರೆ ಮಾಡುವಂತೆ ಎಸ್ಪಿ ತಿಳಿಸಿದರು.
ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಅಹಿತಕರ ಘಟನೆಗಳು ನಡೆಯದಂತೆ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.