ಹರಿಹರ, ಫೆ.15 – ನಗರಸಭೆಯ ಪೌರಾಯುಕ್ತರಾದ ಎಸ್. ಲಕ್ಷ್ಮಿ ಸೇರಿದಂತೆ ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರಿಯಾಗಿ ಕರ್ತವ್ಯ ನಿಭಾಯಿಸಲು ವಿಫಲರಾಗಿ ದ್ದಾರೆ. ಜಿಲ್ಲೆಯ ಹಿರಿಯ ಅಧಿಕಾರಿಗಳು ಇಲ್ಲಿನ ವ್ಯವಸ್ಥೆ ಸರಿಪಡಿಸಬೇಕು ಎಂದು ನಗರಸಭೆಯ ಉಪಾಧ್ಯಕ್ಷ ಹಾಗೂ ಸದಸ್ಯರು ಪ್ರತಿಭಟಿಸಿದ್ದಾರೆ.
ಈ ವೇಳೆ ಮಾತನಾಡಿದ ನಗರಸಭೆ ಸದಸ್ಯ ದಿನೇಶ್ ಬಾಬು, ಪೌರಾಯುಕ್ತರು ಕಚೇರಿಗೆ ಸರಿಯಾದ ಸಮಯಕ್ಕೆ ಆಗಮಿಸುವುದಿಲ್ಲ. ನಗರಸಭೆಯ ಸಿಬ್ಬಂದಿಗಳು ಜನರನ್ನು ಸಣ್ಣ ಪುಟ್ಟ ಕೆಲಸಕ್ಕೆ ತಿಂಗಳುಗಟ್ಟಲೇ ಅಲೆದಾಡಿಸುತ್ತಾರೆ. ಸಾರ್ವಜನಿಕರು ಇವರ ವರ್ತನೆಯನ್ನು ನೋಡಿ ನೋಡಿ ಬೇಸತ್ತಿದ್ದಾರೆ ಎಂದರು.
ಆರ್. ರಾಘವೇಂದ್ರ ಮಾತನಾಡಿ, ನಗರಸಭೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೋವಿಡ್ ಮೀಟಿಂಗ್ ಇದೆ ಎಂದು ನೆಪ ಮಾಡಿಕೊಂಡು ಹೋಗುತ್ತಾರೆ. ನಗರಸಭೆಗೆ ಆಗಮಿಸುವ ಸಾರ್ವಜನಿಕರು ಖಾತೆ ಎಕ್ಸ್ ಟ್ರಾಕ್ಟ್, ಲೈಸೆನ್ಸ್, ಜನನ, ಮರಣ ಪತ್ರ, ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆಯಲು ಬಂದಾಗ ಸಿಬ್ಬಂದಿಗಳು ಇಲ್ಲದೆ ಪರದಾಡುತ್ತಾರೆ ಎಂದರು.
ನಗರದಲ್ಲಿ ಐತಿಹಾಸಿಕ ಶ್ರೀ ಹರಿಹರೇಶ್ವರ ದೇವಾಲಯದ ರಥೋತ್ಸವ ನಡೆಯುತ್ತದೆ. ರಥೋತ್ಸವದ ಬಗ್ಗೆ ಇದುವರೆಗೂ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ಆಗಮಿಸಿ ನೋಡಿರುವುದಿಲ್ಲ ಎಂದು ಹೇಳಿದರು.
ಉಪಾಧ್ಯಕ್ಷ ಬಾಬುಲಾಲ್, ಸದಸ್ಯರಾದ ದಿನೇಶ್ ಬಾಬು, ಕೆ.ಜಿ. ಸಿದ್ದೇಶ್, ಪಿ.ಎನ್. ವಿರುಪಾಕ್ಷ, ಅಬ್ದುಲ್ ಅಲಿಂ, ಮುಖಂಡರಾದ ಆರ್. ರಾಘವೇಂದ್ರ, ಮಾರುತಿ ಬೇಡರ್, ದಾದಾಪೀರ್ ಭಾನುವಳ್ಳಿ ಇತರರು ಪ್ರತಿಭಟನೆಯಲ್ಲಿದ್ದರು.