ದಾವಣಗೆರೆ, ಫೆ. 14- ಬದುಕಿನಲ್ಲಿ ಹಾಸ್ಯ ಇರಬೇಕು. ಅದು ಅಪಹಾಸ್ಯ ವಾಗಬಾರದು ಎಂದು ತರಳಬಾಳು ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಪ್ರಾಣಿಗಳು ಚೇಷ್ಟೆ, ಅಳು ವ್ಯಕ್ತಪಡಿಸುತ್ತವೆ. ಆದರೆ ನಗು ವ್ಯಕ್ತಪಡಿಸುವುದಿಲ್ಲ. ಮಾನವರಿಗೆ ಮಾತ್ರ ನಗು ಸಾಧ್ಯವಿದೆ. ಆ ನಗುವು ಇನ್ನೊಬ್ಬರಿಗೆ ನೋವುಂಟಾಗದಂತೆ ಇರಬೇಕು ಎಂದು ಹೇಳಿದರು.
ಹಾಸ್ಯವು ಮೈಗೆ ಕಚಗುಳಿ ಇಟ್ಟಂತೆ ಇರಬೇಕು. ಕೆಲವು ಗಂಭೀರ ಪ್ರಸಂಗಗಳೂ ಸಹ ಒಮ್ಮೊಮ್ಮೆ ಹಾಸ್ಯ ಉಕ್ಕಿಸುತ್ತವೆ. ಪಠ್ಯಪುಸ್ತಕ ಹೊರತಾಗಿ ಸಾಹಿತ್ಯ ಓದುವ ಕ್ರಮವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ವೇದ, ಉಪನಿಷತ್ತು, ಭಗವದ್ಗೀತೆ ಪ್ರಸ್ಥಾನತ್ರಯಗಳ ಸರಳ ಹಾಗೂ ಮೌಲ್ಯಯುತ ಚಿಂತನೆಗಳ ಅರಿವೂ ಬೇಕು. ಡಿ. ವಿ. ಗುಂಡಪ್ಪನವರು ಕಗ್ಗದಲ್ಲಿ ಹೇಳಿರುವಂತೆ ಪ್ರತಿ ಮನುಷ್ಯ ಜೀವಿಯೂ ಬಾಲ್ಯ, ಯೌವನ, ವೃದ್ಧಾಪ್ಯದಲ್ಲಿ ಬುಗುರಿಯಂತೆ ತಿರುತಿರುಗಿ ಕೊನೆಗೆ ತನ್ನ ದೇಹವನ್ನು ಭೂಮಿಗೆ ಸೇರಿಸುವುದು ಅನಿವಾರ್ಯ. ಜೀವಿತಾವಧಿ ಯಲ್ಲಿ ಉತ್ತಮ ಜ್ಞಾನ ಸಂಪಾದನೆಗೆ ಸಾಹಿತ್ಯಾಭಿರುಚಿ ರೂಢಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ವಿಚಾರಗೋಷ್ಠಿಯಲ್ಲಿ “ಜೀವನೋತ್ಸಾಹ ಕ್ಕಾಗಿ ಹಾಸ್ಯ” ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಎಚ್. ಬಿ. ಮಂಜುನಾಥ್, ಜೀವನೋತ್ಸಾಹವೇ ಸರ್ವಜೀವಿಗಳ ಬದುಕಿನ ಮೂಲದ್ರವ್ಯವಾಗಿದ್ದು, ಜೀವನೋತ್ಸಾಹ ಬದುಕಿನ ಸಾಧನೆಗಳಿಗೆ ಸೋಪಾನವಾಗಿದೆ ಎಂದರು.
ಜೀವನೋತ್ಸಾಹ ವೃದ್ಧಿಗೆ ಆರೋಗ್ಯ, ಅನುಕೂಲಗಳೊಂದಿಗೆ ಹಾಸ್ಯ ಪ್ರಜ್ಞೆ, ಹಾಸ್ಯಸ್ವಾದನೆಯೂ ಪೂರಕವಾಗಿದ್ದು ಅಂತಹ ಹಾಸ್ಯವು ಸದಭಿರುಚಿಯದ್ದಾಗಿರಬೇಕು. ಜೀವನೋತ್ಸಾಹ ಕುಂದದೆ ಮುನ್ನಡೆಯಲು ಹಾಸ್ಯವೂ ಮಾರ್ಗವಾಗಿದ್ದು ಹಾಸ್ಯವು ಕನ್ನಡ ಸಾಹಿತ್ಯದಲ್ಲಿ ಸಮೃದ್ಧವಾಗಿದೆ ಮತ್ತು ನಮ್ಮ ದೈನಂದಿನ ಬದುಕಿನಲ್ಲಿ ನಡೆಯುವ ವಿದ್ಯಮಾನಗಳಲ್ಲೂ ಹಾಸ್ಯ ಸಿಗುತ್ತದೆ ಎಂದರು.
ಶಿವಮೊಗ್ಗ ಪ್ರವಚನಕಾರ ವಿದ್ವಾನ್ ನಟೇಶ್ `ಮಂಕುತಿಮ್ಮನ ಕಗ್ಗದಲ್ಲಿ ಜೀವನ ಮೌಲ್ಯಗಳು ‘ವಿಷಯವಾಗಿ ಉಪನ್ಯಾಸ ನೀಡುತ್ತಾ ಕಗ್ಗದ ಅನೇಕ ಪದ್ಯಗಳನ್ನು ವಿವರಿಸಿದರು. ಸಂಸ್ಥೆಯ ಆಡಳಿತಾಧಿಕಾರಿ ಪ್ರೊ ಎಸ್. ಬಿ. ರಂಗನಾಥ್, ಎಚ್. ವಿ. ವಾಮದೇವಪ್ಪ, ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಎಂ. ಶಿವಸ್ವಾಮಿ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂ.ರಂಗಣ್ಣ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನಾ ವಚನವನ್ನು ಅರ್ಪಿತ ಸ್ನೇಹಿತರು ಹಾಡಿದರು. ಲೇಖಕ ನಾಗರಾಜ ಸಿರಿಗೆರೆ ಸ್ವಾಗತ ಕೋರಿದರು. ಯು.ಚಂದ್ರಪ್ಪ ವಂದಿಸಿದರು.