ಕುಸ್ತಿಯನ್ನು ವ್ಯಾಪಾರಕ್ಕಿಟ್ಟರೆ ನೈತಿಕ ಅಧಃತಪನ

ರಾಣೇಬೆನ್ನೂರು, ಫೆ.14- ಕ್ರೀಡಾಪಟುಗಳು ಕುಸ್ತಿಯನ್ನು ಎಂದೂ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡದೇ ಹಾಗೂ ವ್ಯಾಪಾರೀ ಕರಣಕ್ಕೆ ಇಳಿಯದೇ ನಿಯತ್ತು ಮತ್ತು ಪ್ರಾಮಾಣಿಕವಾಗಿ ಸ್ಪರ್ಧೆ ಗಿಳಿಯಬೇಕು ಎಂದು ಕಾಗಿನೆಲೆ ಸಂಸ್ಥಾನ ಮಠದ ಪೀಠಾಧ್ಯಕ್ಷ ರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಿತ ನುಡಿದರು. 

ನಗರದಲ್ಲಿ ಸೋಮವಾರ ಕುರುಬಗೇರಿಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಬಳಿಯ ಪುರಾತನ ಕಾಲದ ಗರಡಿಮನೆ ಜೀರ್ಣೋದ್ಧಾರ ಹಾಗೂ ಶ್ರೀ ಬೀರೇಶ್ವರ ಗರಡಿಮನೆ ಉದ್ಘಾಟನೆ ನೆರವೇರಿಸಿ ಶ್ರೀಗಳು ಮಾತನಾಡಿದರು. 

ಪೈಲ್ವಾನರು ಕುಸ್ತಿಯನ್ನು ವ್ಯಾಪಾರಕ್ಕೆ ಇಟ್ಟರೆ ಆತನ ನೈತಿಕತೆ ಅಧಃಪತನಗೊಂಡು ಅಸ್ತಿತ್ವ ಇಲ್ಲವಾಗುತ್ತದೆ ಹಾಗೂ ಜನಮಾನಸದಲ್ಲಿ ಅವಮಾನಕ್ಕೀಡಾಗಿ ತ್ರಿಶಂಕು ಸ್ಥಿತಿಗೆ ಹೋಗುತ್ತಾನೆ. ವ್ಯಕ್ತಿಯ ಶಾರೀರಿಕ ಬೆಳವಣಿಗೆಗೆ ಹಾಗೂ ಮಾನಸಿಕವಾಗಿ ಸದಾ ಚೈತನ್ಯಶೀಲವನ್ನಾಗಿ ಮಾಡುವ ಅಗಾಧವಾದ ದಿವ್ಯಶಕ್ತಿಯನ್ನು ಕುಸ್ತಿಯು ಹೊಂದಿದ್ದು, ಮನುಷ್ಯನ ವ್ಯಕ್ತಿತ್ವ ಖುಲಾಯಿಸಲು ಕುಸ್ತಿ ಅನೇಕ ರೀತಿಯ ಅನುಕೂಲತೆಗಳನ್ನು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದಾಗಿ ಯುವ ಜನಾಂಗ ಕುಸ್ತಿಯಿಂದ ವಿಮುಖರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕುಸ್ತಿಯನ್ನು ಉಳಿಸಿ, ಬೆಳೆಸಲು ಕನಕ ಗುರುಪೀಠ ಹೆಚ್ಚಿನ ಅಸಕ್ತಿ ತೋರಿಸುತ್ತಿದ್ದು, ಮುಂದಿನ ವರ್ಷ ಹರಿಹರ ತಾಲ್ಲೂಕಿನಲ್ಲಿ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಪಾಯಿಂಟ್ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ.

ಕುಸ್ತಿಯಲ್ಲಿ ರಾಣೇಬೆನ್ನೂರು ನಗರದ ಕೊಡುಗೆ ಅಪಾರವಾಗಿದ್ದು, ಇಲ್ಲಿನ ಕುಸ್ತಿಪಟುಗಳು ಮೈಸೂರು ದಸರಾ ಇತಿಹಾಸದಲ್ಲಿ ವಿಶಿಷ್ಟ ಸಾಧನೆಗೈದಿದ್ದಾರೆ. ನಗರದ ಕುರುಬಗೇರಿ ಪ್ರದೇಶ ಕುಸ್ತಿಗೆ ಕಳಶದ ಹಾಗಿದೆ. ಇಲ್ಲಿನ ಹಲವಾರು ಪೈಲ್ವಾನರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದ್ದರಿಂದ ಈ ಗರಡಿಮನಿಯಿಂದ ಇನ್ನೂ ನೂರಾರು ಪೈಲ್ವಾನರು ತಯಾರಾಗಿ ತಾಲ್ಲೂಕಿಗೆ ಕೀರ್ತಿ ತರಬೇಕು ಎಂದು ಆಶಯ ವ್ಯಕ್ತಪಡಿಸಿದರು. 

ಗರಡಿಮನಿ ಅಧ್ಯಕ್ಷ ಭರಮಪ್ಪ ಪೂಜಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ಮಾಜಿ ಸಚಿವ ಬಸವರಾಜ ಶಿವಣ್ಣನವರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದಪ್ಪ ಬಾಗಲವರ, ಸದಸ್ಯರುಗಳಾದ ಮಲ್ಲಿಕಾರ್ಜುನ ಅಂಗಡಿ, ನಿಂಗಪ್ಪ ಕೋಡಿಹಳ್ಳಿ, ಹುಚ್ಚಪ್ಪ ಮೇಡ್ಲೇರಿ, ರಮೇಶ ಕರಡೆಣ್ಣನವರ, ಪುಟ್ಟಪ್ಪ ಮರಿಯಮ್ಮನವರ, ನಾಗರಾಜ, ಮುಖಂಡರಾದ ಕೃಷ್ಣಪ್ಪ ಕಂಬಳಿ, ಮೃತ್ಯುಂಜಯ ಗುದಿಗೇರ, ಆನಂದ ಹುಲಬನ್ನಿ, ಕಿರಣ ಗುಳೇದ, ಹನುಮಂತಪ್ಪ ಮುಳಗುಂದ, ಸೋಮು ಕುರವತ್ತಿ, ಆಂಜನೇಯ ಹುಲಿಹಳ್ಳಿ, ಪರಸಪ್ಪ ಹುಲ್ಲತ್ತಿ, ಬಸವರಾಜ ಕಂಬಳಿ, ಶಿವಮೂರ್ತಿ ಚಳಗೇರಿ, ಷಣ್ಮುಖಪ್ಪ ಕಂಬಳಿ, ವಿನೋದ, ಗುಡ್ಡಪ್ಪ ಚಿನ್ನಿಕಟ್ಟಿ, ಬಸವರಾಜ ಮುಳಗುಂದ, ನಾಗರಾಜ ಬಾಗಲವರ, ರಾಜು ಮೈಲಾರ ಆಡಳಿತ ಮಂಡಳಿಯ ಸದಸ್ಯರುಗಳು, ಕುಸ್ತಿಪಟುಗಳು ಸೇರಿದಂತೆ ಮತ್ತಿತರರಿದ್ದರು.

error: Content is protected !!