ದಾವಣಗೆರೆ, ಫೆ.13- ಈ ತಿಂಗಳ ಅಂತ್ಯದಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಬಿಜೆಪಿಗೆ ವಲಸೆ ಹೋದ ಶಾಸಕರು ಮರಳಿ ಕಾಂಗ್ರೆಸ್ಗೆ ಬರಲಿದ್ದಾರೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ್ದಾರೆಂದು ಹೇಳಿದರು.
ರಾಜಕೀಯ ವ್ಯವಸ್ಥೆಯಲ್ಲಿ ಇದೆಲ್ಲಾ ಸಹಜ. ಅನೇಕ ಬಾರಿ ಈ ರೀತಿ ಬದಲಾವಣೆಗಳು ರಾಜಕೀಯದಲ್ಲಿ ಆಗಿವೆ ಎಂದರು. ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಜೊತೆ ಪಕ್ಷದ ವರಿಷ್ಠರು ಸಂಪರ್ಕದಲ್ಲಿದ್ದಾರೆ. ಇಬ್ರಾಹಿಂ ನಮ್ಮ ಜೊತೆಯೇ ಇರುತ್ತಾರೆಂಬ ವಿಶ್ವಾಸವಿದೆ. ಸಿದ್ದರಾಮಯ್ಯ ಅವರು ಇಬ್ರಾಹಿಂ ಜೊತೆ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ವಿವಾದ ಸುಖಾಂತ್ಯಗೊಳ್ಳಲಿ: ಇಜಾಬ್-ಕೇಸರಿ ವಿವಾದ ಬೇಗನೆ ಬಗೆಹರಿ ಯಲಿ ಎಂಬುದು ನಮ್ಮ ಆಶಯ ಕೂಡ. ಈ ವಿಚಾರದ ಬಗ್ಗೆ ಸರ್ಕಾರ-ನ್ಯಾಯಾಲಯ ಒಂದು ತೀರ್ಮಾನಕ್ಕೆ ಬಂದು ಇಬ್ಬರಿಗೂ ಸರಿಯಾದ ನ್ಯಾಯ ಸಿಗುವಂತೆ ಆಗಬೇಕು ಎಂದರು.
ಸಿದ್ದರಾಮಯ್ಯ ಅಶಕ್ತರು ಎಂಬ ಇಬ್ರಾಹಿಂ ಮಾತನ್ನು ತಳ್ಳಿ ಹಾಕಿದ ಜಾರಕಿ ಹೊಳಿ, ಸಿದ್ದರಾಮಯ್ಯ ಅವರು ಯಾವಾಗಲು ಟಾಪ್ ಒನ್ ಮುಖಂಡರು, ಅವರಿಗೆ ರಾಜ್ಯದಲ್ಲಿ ಅವರದೇ ಆದ ಬೆಂಬಲಿಗರ ಪಡೆ ಇದೆ ಎಂದು ಪ್ರತಿಕ್ರಿಯಿಸಿದರು.