ಸಿಎಂ ಬೊಮ್ಮಾಯಿ ಸರ್ಕಾರ ಪಂಚರ್ ಆದ ಬಸ್‌ನಂತೆ : ಸಿಎಂ ಇಬ್ರಾಹಿಂ ವ್ಯಂಗ್ಯ

ದಾವಣಗೆರೆ, ಫೆ.13- ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರ ಒಂದು ರೀತಿ ಪಂಚರ್ ಆದ ಬಸ್ ಇದ್ದಂತೆ. ಯಾವಾಗ ಏನಾಗುತ್ತೋ  ಗೊತ್ತಿಲ್ಲ. ಏನು ಬೇಕಾದರೂ ಆಗಬಹುದು. ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿದೆ ಎಂದು ಕಾಂಗ್ರೆಸ್‍ನಿಂದ ಬಂಡಾಯ ಎದ್ದಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ವ್ಯಂಗ್ಯವಾಡಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಕಥೆ ಮುಗಿದಿದೆ ಅಂದರೆ ಸತ್ತು ಹೋಗಿದೆ. ಅದನ್ನು ಸುಡಬೇಕೋ ಹೂಳಬೇಕೋ ಎನ್ನುವುದೇ ಸದ್ಯಕ್ಕೆ ಇರುವ ಪ್ರಶ್ನೆ. ಬಸವ ಕೃಪಾ (ಲಿಂಗಾಯತ) ಆದರೆ ಉಳಿಬೇಕು. ಕೇಶವ ಕೃಪಾ (ಆರ್‍ಎಸ್‍ಎಸ್) ಆದರೆ ಸುಡಬೇಕು ಎಂಬ ಸ್ಥಿತಿ ಇದೆ ಎಂದು ಹೇಳಿದರು.

ಬಿಜೆಪಿಯವರಿಗೆ ರಾಮ್ ಮಂದಿರ ಆಯಿತು, ಗೋ ಹತ್ಯೆ ಆಯಿತು. ಈಗ ಹಿಜಾಬ್ ಹಿಡಿದಿದ್ದಾರೆ. ಹಿಜಾಬ್ ಅಂದ್ರೆ ಅರ್ಥವೇ ಬಿಜೆಪಿಗೆ ಗೊತ್ತಿಲ್ಲ. ತಲೆ ಮೇಲೆ ಸೆರಗು ಹೊತ್ತು ಕೊಳ್ಳುವುದು. ಮಾರವಾಡಿ ಮಹಿಳೆಯರು ಮುಖದ ತುಂಬಾ ಸೆರಗು ಹೊತ್ತುಕೊಳ್ಳುತ್ತಾರೆ. ಅದು ತಪ್ಪಾ. ಸಮವಸ್ತ್ರ ಮಾಡಲಿ, ಮಕ್ಕಳು ವೇಲ್ ಹೆಗಲಮೇಲೆ ಹಾಕಿಕೊಳ್ಳುತ್ತಾರೆ. ಅದೇ ವೇಲ್ ತಲೆ ಮೇಲೆ ಹಾಕಿಕೊಂಡರೆ ಇವರಿಗೆ ಏನು ಕಷ್ಟಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‍ನಿಂದ ಹೊರ ಬರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಒಬ್ಬ ನಿಸ್ಸಹಾಯಕರು. ಡಿಕೆಶಿಗೆ ಕೇಳಿದರೆ ಮೇಲಿನವರ ಕಡೆ ತೋರಿಸುತ್ತಾರೆ. ಸಿದ್ದರಾಮಯ್ಯ ಈ ರೀತಿ ಆಗಿದ್ದಕ್ಕೆ ಸಾಕಷ್ಟು ನನಗೆ ನೋವು ಇದೆ. ಬಲವಾಗಿದ್ದ ವ್ಯಕ್ತಿ ಈ ರೀತಿಯಾಗಿರುವುದಕ್ಕೆ ನೋವು ಇದೆ.

ಕೆಲವರು ವಯಸ್ಸಾದ ನಂತರ ನಿಶಕ್ತರಾಗು ತ್ತಾರೆ. ಆದರೆ ಇನ್ನು ಕೆಲವರು ರಾಜಕೀಯದಲ್ಲಿ ನಿಶಕ್ತರಾಗಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ರಾಜಕೀಯವಾಗಿ ನಿಶಕ್ತರಾಗುತ್ತಿದ್ದಾರೆ ಎಂದರು.  

ನಮ್ಮದು ಲವ್ ಮ್ಯಾರೇಜ್ ಅಲ್ಲ. ಅರೆಂಜ್ ಮ್ಯಾರೇಜ್, ಮನವೊಲಿಸುವು ದರಿಂದ ಏನು ಆಗಲ್ಲ. ಈ ಬಗ್ಗೆ ಹೈಕಮಾಂಡ್ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ. ಭಾನುವಾರವೇ ಮಧ್ಯಾಹ್ನ 3 ಕ್ಕೆ ಹುಬ್ಬಳ್ಳಿಯಲ್ಲಿ ಸಭೆ ನಡೆಸುತ್ತೇವೆ. ಬೆಳಗಾವಿಯಲ್ಲಿ ಸಭೆ ಮಾಡಿ ನಂತರ ನನ್ನ ಮುಂದಿನ ನಿರ್ಧಾರ ಮಾಡುತ್ತೇನೆ ಎಂದರು.

error: Content is protected !!