ದಾವಣಗೆರೆ, ಫೆ.11- ಜಿಲ್ಲೆಯ ಕೆಲವೆಡೆ ಹಿಜಾಬ್-ಕೇಸರಿ ಶಾಲು ವಿಚಾರವಾಗಿ ಗಲಾಟೆಯಾದ ಕಾರಣ ಜಿಲ್ಲಾಡಳಿತವು ಕಡಿವಾಣ ಹಾಕಲು ಮುಂದಾಗಿದ್ದು, ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಜಾಗೃತಿ ಮೂಡಿಸುತ್ತಾ ಶಾಂತಿ ಕಾಪಾಡಲು ಮನವಿ ಮಾಡಲಾಗುತ್ತಿದೆ.
ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಾಗಿರುವ ಸಂಬಂಧ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ಪಿ ಸಿ.ಬಿ. ರಿಷ್ಯಂತ್ ಇಬ್ಬರೂ ಒಟ್ಟಾಗಿ ಸೇರಿ ಸ್ಥಳೀಯ ಆಜಾದ್ ನಗರ, ಅಹ್ಮದ್ ನಗರ, ವಿನೋಬನಗರ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿನ ಮಸೀದಿಗಳಿಗೆ ಕಾಲ್ನಡಿಗೆ ಮುಖೇನ ತೆರಳಿ ಶಾಂತಿ ಕಾಪಾಡುವಂತೆ ಮುಸ್ಲಿಂ ಸಮಾಜದ ಮುಖಂಡರ ಜೊತೆ ಮಾತುಕತೆ ನಡೆಸಿ, ಮನವಿ ಮಾಡಿದರು.
ಜಿಲ್ಲೆಯಲ್ಲಿ ಹಿಜಾಬ್ – ಕೇಸರಿ ವಿಚಾರವಾಗಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕಟ್ಟುನಿ ಟ್ಟಿನ ಕ್ರಮ ಕೈಗೊಂಡಿದೆ. ಸಾರ್ವಜನಿಕರು ಜಿಲ್ಲಾಡಳಿತ ದೊಂದಿಗೆ ಸಹಕರಿಸಬೇಕು. ಯಾವುದೇ ಶಾಂತಿ ಕದಡುವ ಯತ್ನಗಳನ್ನು ನಡೆಸಬಾರದು ಎಂದು ಡಿಸಿ – ಎಸ್ಪಿ ಮನವಿ ಮಾಡಿದರು.
ಶಾಂತಿ, ಸೌಹಾರ್ದತೆ ಕಾಪಾಡಿ
ಸುಳ್ಳು ಸಂದೇಶ ಹಾಗೂ ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಪ್ರಚೋದನಾಕಾರಿ ಹೇಳಿಕೆಗಳು, ಸಂದೇಶ ನೀಡುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಅನಗತ್ಯವಾಗಿ ಶಾಂತಿ, ಸುವ್ಯವಸ್ಥೆ ಕದಡುವುದು ಅಥವಾ ಗದ್ದಲ ಸೃಷ್ಟಿಸುವ ಪ್ರಯತ್ನ ಹಾಗೂ ಸಾಮಾಜಿಕ ಜಾಲತಾಣ ಗಳಲ್ಲಿ ಪ್ರಚೋದನಕಾರಿ ಸಂದೇಶ ಹಾಕುವುದನ್ನು ಯಾರೂ ಮಾಡಬಾರದು. ಯಾವುದೇ ಸಂದರ್ಭದಲ್ಲಿಯೂ ಜನರು ಕಾನೂನು ಕೈಗೆತ್ತಿಕೊಳ್ಳುವುದಕ್ಕೆ ಮುಂದಾಗಬಾರದು. ಕೆಲವೆಡೆ ಅನವಶ್ಯಕವಾಗಿ ಸಣ್ಣ- ಪುಟ್ಟ ಗಲಾಟೆಗಳಾಗಿವೆ. ಅವುಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ಯಶಸ್ವಿಯಾಗಿ ನಿಭಾಯಿಸಿದೆ ಮತ್ತು ಮುಂದೆಯೂ ಕೂಡ ಈ ರೀತಿಯ ಗಲಾಟೆಗಳಾಗದಂತೆ ನೋಡಿಕೊಳ್ಳಲಾಗುವುದು.
– ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿ
ಸಾಮಾಜಿಕ ಜಾಲತಾಣದ ಮೇಲೆ ನಿಗಾ
ಸಾಮಾಜಿಕ ಜಾಲತಾಣದ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಿ. ಯಾರೂ ಪ್ರಚೋದನಕಾರಿ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವಂತಿಲ್ಲ. ಮಸೀದಿಗಳಲ್ಲೂ ಕೇಸರಿ, ಹಿಜಾಬ್ ಬಗ್ಗೆ ಚರ್ಚೆ ಮಾಡುವಂತಿಲ್ಲ. ಜಿಲ್ಲೆಗೆ ರಕ್ಷಣಾ ಪಡೆಗಳು ಕೂಡ ಆಗಮಿಸಿದ್ದು ಇದುವರೆಗೂ ಬಳಕೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ, ಸಾರ್ವಜನಿಕರು ಹೀಗೆಯೇ ಶಾಂತಿಯುತವಾಗಿ ಸಹಕರಿಸಬೇಕು.
– ಸಿ.ಬಿ. ರಿಷ್ಯಂತ್, ಎಸ್ಪಿ
ಹಿಜಾಬ್ – ಕೇಸರಿ ಶಾಲು ಬಗ್ಗೆ ಚರ್ಚೆ ಮಾಡಬೇಡಿ, ಎಲ್ಲ ಸಮಾಜ ದವರು ಅಣ್ಣ-ತಮ್ಮಂದಿರ ಹಾಗೆ ಸಹಬಾಳ್ವೆಯಿಂದ ಇರಬೇಕು. ನಿಷಾಧಾಜ್ಞೆ ಇರುವ ಕಾರಣ ಪ್ರಾರ್ಥ ನೆಗೆ ಜನ ಸೇರಿಸದೇ ಮನೆಯಲ್ಲೇ ಪ್ರಾರ್ಥನೆ ಮಾಡಿ ಎಂದು ಸೂಚಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿ ಕಾರಿ, ಜಿಲ್ಲೆಯಲ್ಲಿ ಇದುವರೆಗೂ ಎಲ್ಲರೂ
ಸಹೋದರರಂತೆ ಬಾಳುತ್ತಿದ್ದೇವೆ. ಜನಸಂದಣಿ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿ, ಅವರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡ ಖಾಸಿಂಸಾಬ್, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಸೇರಿದಂತೆ ಇತರರು ಇದ್ದರು.