ಹರಿಹರ, ಫೆ. 11 – ಎಲ್ಲಾ ವರ್ಗದವರು ಉತ್ತಮ ಸಹಕಾರ ನೀಡುತ್ತಿರುವು ದರಿಂದ ಹರಿಹರದಲ್ಲಿ ಶಾಂತಿಯ ವಾತಾವರಣ ಸೃಷ್ಟಿಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.
ನಗರದ ಇಮಾಮ್ ಮೊಹಲ್ಲ ಬಡಾವಣೆ ಮಸೀದಿಗೆ ಭೇಟಿ ನೀಡಿ ಮುಸ್ಲಿಂ ಧರ್ಮ ಗುರುಗಳಾದ ಖಾಜಿ ಶಂಶುದ್ದೀನ್ ಸಾಬ್ ಬರಕಾತಿ ಬಳಿ ಚರ್ಚೆ ಮಾಡಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಒಬ್ಬ ಕಿಡಿಗೇಡಿ ಮಾಡಿದ ಸಣ್ಣ ತಪ್ಪಿನಿಂದ ಮೊನ್ನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂದೆ ಘಟನೆ ನಡೆದು ಶಾಂತಿಗೆ ಧಕ್ಕೆಯಾಗಿದೆ. ನಂತರ 144ನೇ ಸೆಕ್ಷನ್ ಜಾರಿಗೆ ತಂದಿದ್ದು, ನಮ್ಮ ಆದೇಶಕ್ಕೆ ಮನ್ನಣೆ ಕೊಟ್ಟು, ಎಲ್ಲ ವರ್ಗದವರು ಪಾಲನೆ ಮಾಡುತ್ತಿದ್ದಾರೆ. ಸಹಕಾರ ಮನೋಭಾವದಿಂದ ಶಾಂತಿಯುತ ಜೀವನ ಸಾಧ್ಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಮೊನ್ನೆ ಕೇಸರಿ ಶಾಲು ಮತ್ತು ಹಿಜಾಬ್ ಧರಿಸುವ ವಿಚಾರಕ್ಕೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಈವರೆಗೆ 9 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸುವ ಕಾರ್ಯವನ್ನು ಮಾಡಲಾಗಿದೆ ಎಂದು ಹೇಳಿದರು.
ಇಬ್ಬರಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಕಳಿಸಲಾಗಿದೆ ಮತ್ತು ಮಲೇಬೆನ್ನೂರು ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ 4 ಜನರನ್ನು ಬಂಧಿಸಲಾಗಿದೆ ಎಂದವರು ತಿಳಿಸಿದರು.
ಮುಸ್ಲಿಂ ಧರ್ಮ ಗುರು ಖಾಜಿ ಶಂಶುದ್ದಿನ್ ಸಾಬ್ ಮಾತನಾಡಿ, ಇಲ್ಲಿನ ಎಲ್ಲಾ ಜನರು ಬುದ್ದಿವಂತರಿದ್ದಾರೆ. ಶಾಂತಿಗೆ ಧಕ್ಕೆ ತರುವವರ ಮಾತಿಗೆ ಯಾರೂ ಮನ್ನಣೆ ಕೊಡುವುದಿಲ್ಲ. ಎಲ್ಲಾ ವರ್ಗದವರು ಒಂದೆಡೆ ಸೇರಿ ಮೊನ್ನೆ ನಡೆದ ಕ್ಷುಲ್ಲಕ ಘಟನೆ ಮುಂದೆ ನಡೆಯದಂತೆ ಎಚ್ಚರ ವಹಿಸುವುದು ಒಳ್ಳೆಯದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಸಿಪಿಐ ಸತೀಶ್ ಕುಮಾರ್, ಪಿಎಸ್ಐ ಸುನಿಲ್ ಬಸವರಾಜ್ ತೆಲಿ, ನಗರಸಭೆ ಸದಸ್ಯರಾದ ಆರ್. ಸಿ. ಜಾವೇದ್, ಮುಜಾಮಿಲ್ ಬಿಲ್ಲು, ಮಾಜಿ ಸದಸ್ಯ ಮಹಮ್ಮದ್ ಸಿಗ್ಬತ್ ಉಲ್ಲಾ, ಹಾಜಿ ಅಲಿ, ಮಹಮ್ಮದ್ ಫೈರೋಜ್, ಮುಖಂಡರಾದ ಮನ್ಸೂರ್ ಮದ್ದಿ, ಬಿಸ್ಮಿಲ್ಲಾ ಖಾನ್, ಆಸೀಫ್ ಜುನೇದಿ, ವಕೀಲರಾದ ಪ್ರಸನ್ನ ಕುಮಾರ್, ಆಸೀಫ್ ಹಾಲಿ ಮತ್ತಿತರರು ಉಪಸ್ಥಿತರಿದ್ದರು.