ಜಗಳೂರು, ಫೆ.11- ಪಟ್ಟಣದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಅಗತ್ಯ ಸಹಕಾರ ನೀಡುತ್ತೇನೆ ಎಂದು ಶಾಸಕ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು.
ಅವರಿಂದು ಕನ್ನಡ ಭವನ ನಿರ್ಮಾಣದ ಕುರಿತಂತೆ ತಮ್ಮೊಡನೆ ಚರ್ಚಿಸಲು ಆಗಮಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಅವರೊಂದಿಗೆ ಮಾತನಾಡುತ್ತಿದ್ದರು.
ಹಿಂದುಳಿದ ತಾಲ್ಲೂಕು ಜಗಳೂರಿನಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ, ರಂಗಭೂಮಿ, ಜಾನಪದ ಕಲಾ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಕನ್ನಡದ ಚಟುವಟಿಕೆಗಳು ನಡೆಯಲು ತಾಲ್ಲೂಕಿನ ಎಲ್ಲ ಸಾರಸ್ವತ ಲೋಕದ ದಿಗ್ಗಜರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಗಳೂರಿನಲ್ಲಿ ಆಯೋಜಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಜಗಳೂರು ತಾಲ್ಲೂಕು ಹಿಂದುಳಿದ ಪ್ರದೇಶ ವೆಂದು ಗುರುತಿಸಿಕೊಂಡಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತ ಎನ್ನುವ ಹೆಗ್ಗಳಿಕೆ ಇದೆ. ಅಸಂಖ್ಯಾತ ಜಾನಪದ ಕಲಾವಿದರು, ಸಾಹಿತಿಗಳು, ಕವಿಗಳು ಜಗಳೂರು ತಾಲ್ಲೂಕಿನಲ್ಲಿದ್ದಾರೆ. ಅವರ ಪ್ರತಿಭೆ ಅನಾವರಣಗೊಳ್ಳಲು ಮತ್ತು ಹೆಚ್ಚಿನ ಸಾಹಿತ್ಯಿಕ ಚಟುವಟಿಕೆಗಳು ನಡೆ ಯಲು ತಾಲ್ಲೂಕು ಕೇಂದ್ರ ದಲ್ಲಿ ಸೂಕ್ತ ಸ್ಥಳದ ಕೊರತೆಯಿದೆ. ಈಗಾಗಲೇ ಜಗಳೂರಿನಲ್ಲಿ ಇರುವ ಕನ್ನಡ ಭವನ ಬಳಕೆಗೆ ಅಷ್ಟೊಂದು ಯೋಗ್ಯವಾಗಿ ಲ್ಲವಾದ್ದರಿಂದ ಬೇರೊಂದು ಪ್ರಶಸ್ತವಾದ ಸ್ಥಳದಲ್ಲಿ ವಿಶಾಲವಾದ ಕನ್ನಡ ಭವನ ಮತ್ತು ತಾಲ್ಲೂಕು ಕಸಾಪ ಕಛೇರಿ ನಿರ್ಮಿ ಸಲು ಸ್ಥಳ ಮಂಜೂರು ಮಾಡಲು ಹಾಗೂ ಕನ್ನಡ ಭವನ ನಿರ್ಮಾಣಕ್ಕೆ ಶಾಸಕರು ಅಗತ್ಯವಾದ ಹಣಕಾಸು ನೆರವು ನೀಡುವಂತೆ ವಾಮದೇವಪ್ಪ ಅವರು ಮನವಿ ಮಾಡಿದರು.
ಶಾಸಕರೊಂದಿಗೆ ನಡೆದ ಈ ಸಮಾಲೋಚನಾ ಸಭೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ಜಗಳೂರು ತಾಲ್ಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷ ಹಜರತ್ ಆಲಿ, ಮಾಜಿ ಅಧ್ಯಕ್ಷ ತಿಮ್ಮರಾಜು, ಹಿರಿಯ ಸಾಹಿತಿ ರವಿಕುಮಾರ್ ಮತ್ತಿ ತರು ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು.