ದಾವಣಗೆರೆ, ಫೆ.11- ರಾಜ್ಯದಲ್ಲಿ ದಲಿತ, ಶೋಷಿತ ತಳ ಸಮುದಾಯಗಳ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ನಲ್ಲಿ ವಿಶೇಷ ಆದ್ಯತೆ ನೀಡಬೇಕೆಂದು ಆಗ್ರಹಿಸಿ ದಲಿತ, ಶೋಷಿತ ಸಮಾಜ ಸಂಘರ್ಷ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಹೆಚ್. ಕಾಂತರಾಜ್ ನೇತೃತ್ವದ ಸಮಿತಿಯ ಜನಗಣತಿ ವರದಿಯನ್ನು ರಾಜ್ಯ ಸಂಪುಟ ಸಭೆ ಮತ್ತು ಸದನದಲ್ಲಿ ಮಂಡಿಸಿ ಅಂಗೀಕರಿಸಬೇಕು. ರಾಜ್ಯ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳ ಸಮಗ್ರ ಅಭಿವೃದ್ಧಿಗಾಗಿ ಪ್ರತಿ ಕುಟುಂಬಕ್ಕೂ 25 ಲಕ್ಷ ರೂ.ಗಳ ವಿಶೇಷ ಅನುದಾನವನ್ನು ಪ್ರಸ್ತುತ ಬಜೆಟ್ ನಲ್ಲಿ ಘೋಷಿಸುವ ಮೂಲಕ ಸ್ವಉದ್ಯೋಗಕ್ಕೆ ರಾಜ್ಯ ಸರ್ಕಾರ ನೆರವಾಗಬೇಕು. ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು. ನ್ಯಾ. ನಾಗಮೋಹನದಾಸ್ ಆಯೋಗದ ವರದಿ ಸೇರಿದಂತೆ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣದ ನ್ಯಾ. ಸದಾಶಿವ ಆಯೋಗದ ವರದಿಯನ್ನು ಈ ಕೂಡಲೇ ತಮ್ಮ ಸಚಿವ ಸಂಪುಟ ಸಭೆಯಲ್ಲಿ ಮತ್ತು ವಿಧಾನ ಮಂಡಲದ ಪ್ರಸ್ತುತ ಬಜೆಟ್ ಅಧಿವೇಶನದಲ್ಲಿ ಚರ್ಚೆಗೊಳಪಡಿಸಬೇಕು ಮತ್ತು ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿವೇಶನ ಮತ್ತು ವಸತಿ ರಹಿತ ಕೃಷಿ ಕೂಲಿ ಮತ್ತು ಅಸಂಘಟಿತ ಕಾರ್ಮಿಕರಿಗೆ ನಿವೇಶನ ನೀಡಿ, ಪಕ್ಕಾ ಮನೆ ನಿರ್ಮಿಸಿಕೊಡಬೇಕು. ದಲಿತ, ಹಿಂದುಳಿದ ಅಲ್ಪಸಂಖ್ಯಾತ ಜನಾಂಗ ದವರ ಅಭಿವೃದ್ಧಿ ನಿಗಮಗಳಲ್ಲಿನ ಸಹಾಯಧನದ ಈಗಿರುವ ಮಿತಿಯನ್ನು ರದ್ದುಪಡಿಸಿ, ಪ್ರತಿ ಫಲಾನುಭವಿಯ ಯೋಜನಾ ವರದಿಗೆ ಶೇ.75 ರ ಸಹಾಯ ಧನವನ್ನು ಬಜೆಟ್ನಲ್ಲಿ ಘೋಷಿಸಬೇಕು ಎಂದು ಕೋರಲಾಗಿದೆ.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷ್, ಎಸ್.ಹೆಚ್. ಶಾಂತರಾಜ್, ಸಿದ್ದೇಶ್ ಮಾದಾಪುರ, ಮಂಜುನಾಥ್ ಹರಿಹರ, ಮಧು ಬೆಳ್ಳಿಗನೂಡು ಸೇರಿದಂತೆ ಇತರರು ಭಾಗವಹಿಸಿದ್ದರು.