ಪ್ರಜಾ ತಾಂತ್ರಿಕ ಶಿಕ್ಷಣ ಉಳಿಸಲು ಸಂಕಲ್ಪ

ದಾವಣಗೆರೆ, ಫೆ.11- ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಕೋಮು ಸಂಘರ್ಷದ ಘಟನೆಗಳು ಜರುಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್ ಓ) ರಾಜ್ಯ ಸಮಿತಿಯಿಂದ ಮಹಾನ್ ವ್ಯಕ್ತಿಗಳ, ನವೋದಯ ಚಿಂತಕರ ಧರ್ಮನಿರಪೇಕ್ಷತೆ, ವೈಜ್ಞಾನಿಕ ವಿಚಾರಗಳನ್ನು ಕೊಂಡೊಯ್ಯುವ ಅವಶ್ಯಕತೆಯನ್ನು ಮನಗಂಡು ಇಂದಿನಿಂದ ರಾಜ್ಯವ್ಯಾಪಿ ಪ್ರಚಾರ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ ಎಂದು ಎಐಡಿಎಸ್ ಓ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ತಿಳಿಸಿದ್ದಾರೆ.

ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ನೇತಾಜಿ, ಹಾಗೂ ನವೋದಯ ಚಿಂತಕರಾದ ಈಶ್ವರ ಚಂದ್ರ ವಿದ್ಯಾಸಾಗರ್, ರಾಜಾರಾಂ ಮೋಹನ್ ರಾಯ್ ಹಾಗೂ ವಿವೇಕಾನಂದರು ಇವರುಗಳ ವಿಚಾರವನ್ನು ಎಲ್ಲೆಡೆ ಹರಡುವ ಕಾರ್ಯದಲ್ಲಿ ತೊಡಗಿದ್ದೇವೆ. ವೈಜ್ಞಾನಿಕ-ಧರ್ಮನಿರಪೇಕ್ಷ-ಪ್ರಜಾತಾಂತ್ರಿಕ ಶಿಕ್ಷಣ ನಮ್ಮದಾಗಲಿ ಎಂಬ ಘೋಷಣೆಯೊಂದಿಗೆ ಮಹಾನ್ ವ್ಯಕ್ತಿಗಳ ಸೂಕ್ತಿ ಇರುವ ಪ್ಲಕಾರ್ಡ್ ಹಿಡಿದು ನಗರದ ಮೈದಾನಗಳಲ್ಲಿ, ಕ್ರೀಡಾಂಗಣ, ಕಾಲೇಜುಗಳು, ಹಾಸ್ಟೆಲ್ ಗಳಲ್ಲಿ ಪ್ರಚಾರ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ನೇತಾಜಿ ಅವರ 125ನೇ ಜನ್ಮ ದಿನಾಚರಣೆ ಮಹತ್ವವನ್ನು ವಿದ್ಯಾರ್ಥಿಗಳು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಅವರ ವಿಚಾರದ ಕುರಿತು ಹಲವು ಚರ್ಚೆಗಳು, ಕಾರ್ಯಕ್ರಮಗಳು ನಡೆಯುತ್ತಿವೆ. ವಿದ್ಯಾರ್ಥಿಗಳಲ್ಲಿ ಐಕ್ಯತೆಯನ್ನು ಕಾಪಾಡಲು ಈ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಪ್ರಸ್ತುತ ಎದುರಿಸುತ್ತಿರುವ ಹಲವು ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳು ಒಂದಾಗಿ ಹೋರಾಡಲು ಎಐಡಿಎಸ್ ಓ ಸಂಘಟನೆ ಕರೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಹಲವು ಮೈದಾನ, ಕ್ರೀಡಾಂಗಣ ಹಾಗೂ ಹಾಸ್ಟೆಲ್ ಗಳಲ್ಲಿಯೂ ಇಂದು ಪ್ರಚಾರ ನಡೆಸಲಾಯಿತು ಎಂದರು.

error: Content is protected !!