ದಾವಣಗೆರೆ, ಫೆ.11- ನಗರದ ಹೊರವಲಯದ ರವೀಂದ್ರನಾಥ ಹೊಸ ಬಡಾವಣೆಯ ಶ್ರೀ ಚಾಮುಂಡೇಶ್ವರಿ, ಆಂಜನೇಯ, ಶ್ರೀ ವಿನಾಯಕ ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಶ್ರೀ ಚಾಮುಂಡೇಶ್ವರಿ, ಆಂಜನೇಯ, ಗಣೇಶ ಹಾಗೂ ನವಗ್ರಹಗಳ ದೇವಸ್ಥಾನಗಳ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಶುಕ್ರವಾರ ಶ್ರದ್ಧಾ-ಭಕ್ತಿಯಿಂದ ನೆರವೇರಿತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಲ್ಲಿ ಗ್ರಾಮೀಣ ಜೀವನದ ಸಂಸ್ಕಾರ, ಸೊಗಡು ಅಭಿವ್ಯಕ್ತವಾಗುತ್ತಿದೆ. ದುಡಿಮೆಯ ಒಂದಿಷ್ಟು ಹಣವನ್ನು ವಿನಿಯೋಗಿಸಿ, ದಾನಿಗಳ, ಜನಪ್ರತಿನಿಧಿಗಳ ಸಹಕಾರದೊಂದಿಗೆ ದೇವಸ್ಥಾನ ನಿರ್ಮಾಣ ಮಾಡಿ, ಶ್ರದ್ಧಾ-ಭಕ್ತಿಯಿಂದ ಸೇವಾ ಕಾರ್ಯ ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.
ಮನುಷ್ಯನಿಗೆ ಧನ್ಯತಾ ಭಾವ ಬರುವುದು ಜೀವನದಲ್ಲಿ ಎರಡು ಸಂದರ್ಭಗಳಲ್ಲಿ ಮಾತ್ರ. ಇತರರ ಸೇವೆಯಲ್ಲಿ ತೊಡಗಿಸಿಕೊಂಡಾಗ ಮತ್ತು ಧರ್ಮ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಧನ್ಯತಾ ಭಾವ ಬರಲು ಸಾಧ್ಯ ಎಂದು ಹೇಳಿದರು.
ಸಮಷ್ಠಿ ಪ್ರಜ್ಞೆಯನ್ನು ಜಾಗೃತಿಗೊಳಿಸುವುದು ದೇವಸ್ಥಾನಗಳ ಉದ್ದೇಶವಾಗಿದೆ. ಮೌಲ್ಯಗಳನ್ನು ಕಲ್ಪಿಸಿಕೊಡುವಲ್ಲಿ ದೇವಸ್ಥಾನಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ತಿಳಿಸಿದರು.
ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್ ಅವರ ಪ್ರಾಮಾಣಿಕ ಸೇವೆಯನ್ನು ಯಾರೂ ಮರೆಯುವಂತಿಲ್ಲ. ಪ್ರಸ್ತುತ ಕಲುಷಿತ ರಾಜಕೀಯ ವಾತಾವರಣದಲ್ಲೂ ತಾತ್ವಿಕ ನೆಲೆಗಟ್ಟಿನ ಅಡಿಯಲ್ಲಿ ಅಪೂರ್ವ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ದೇವಸ್ಥಾನ ಕಟ್ಟಿದರಷ್ಟೇ ಸಾಲದು, ನಿತ್ಯ ಭಕ್ತಿಯಿಂದ ಪೂಜೆ, ಪುನಸ್ಕಾರಗಳನ್ನು ತಪ್ಪದೇ ಮಾಡಬೇಕು. ಯಾವತ್ತೂ ದೇಗುಲ ಹಾಳಾಗದಂತೆ ಭಕ್ತರು ಎಚ್ಚರ ವಹಿಸಬೇಕೆಂದು ಕರೆ ನೀಡಿದರು.
ಮಾಜಿ ಶಾಸಕ ಎಂ. ಬಸವರಾಜನಾಯ್ಕ ಮಾತನಾಡಿ, ಪ್ರತಿ ಗ್ರಾಮಗಳಲ್ಲೂ ದೇವಾಲಯಗಳನ್ನು ನಿರ್ಮಿಸುವ ಮೂಲಕ ಜೀವನ ಸಾರ್ಥಕಗೊಳಿಸುವ ಕೆಲಸವನ್ನು ಹಿಂದೂ ಸಮಾಜ ಮಾಡುತ್ತಿದೆ ಎಂದರು.
ತಾ.ಪಂ. ಮಾಜಿ ಸದಸ್ಯ ಶಿರಮಗೊಂಡನಹಳ್ಳಿ ಶಿವಮೂರ್ತೆಪ್ಪ ಮಾತನಾಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಆರ್. ರುದ್ರೇಶನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಮಹಾನಗರ ಪಾಲಿಕೆ ಸದಸ್ಯರಾದ ಗೀತಾ ನಾಗರಾಜ್, ಶಿರಮಗೊಂಡನಳ್ಳಿ ಗ್ರಾ.ಪಂ. ಅಧ್ಯಕ್ಷರಾದ ವಿನುತ ಸುರೇಶ್, ಬಿಜೆಪಿ ಮುಖಂಡ ಕೃಷ್ಣಪ್ಪ, ಎಂ. ಆನಂದ್, ಶ್ರೀಧರ ಪಾಟೀಲ್, ಸಿದ್ರಾಮಣ್ಣ, ನಾಗರಾಜ್, ವೀರಭದ್ರಪ್ಪ, ಭಾಗ್ಯಮ್ಮ, ಶಾಂತಾಬಾಯಿ, ಸಿದ್ಧಲಿಂಗಪ್ಪ, ಆರ್.ಜೆ. ರಾಜಪ್ಪ ಮತ್ತಿತರರಿದ್ದರು.