ಭಜನಾ ಪರಂಪರೆ ಭಾವೈಕ್ಯತೆಯ ದಾರಿದೀಪ : ಬಾಮ

ದಾವಣಗೆರೆ, ಫೆ.11- ಆಧುನಿಕ ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರದ ಆರ್ಭಟದಲ್ಲಿ ನಮ್ಮ ಪುರಾತನ ಸಂಸ್ಕೃತಿ, ಸಂಸ್ಕಾರ ಮೂಲೆಗುಂಪಾಗುತ್ತಿರುವುದು ದುರಂತ. ಜಾತಿ, ಮತ, ಪಂಥಗಳ ಭೇದ-ಭಾವನೆಗಳನ್ನು ಬಿಟ್ಟು ಭಾವ-ಭಕ್ತಿಯ ಅಧ್ಯಾತ್ಮ ಪರಂಪರೆಯ ಭಜನಾ ಸಂಸ್ಕೃತಿ ಭಾವೈಕ್ಯತೆಯ ಸಂಕೇತ ಹಾಗೂ ಮುಂದಿನ ಪೀಳಿಗೆಗೆ ಉನ್ನತ ಸಂಸ್ಕಾರಕ್ಕೆ ದಾರಿದೀಪವೂ ಆಗಿರುತ್ತದೆ ಎಂದು ಹಿರಿಯ ಪತ್ರಕರ್ತ, ರಂಗಕರ್ಮಿ ಬಾ.ಮ. ಬಸವರಾಜಯ್ಯ ತಮ್ಮ ಮನದಾಳದ ಮಾತು ಪ್ರಸ್ತುತ ಪಡಿಸಿದರು. 

ನಗರದ ಬಾಡಾ ಕ್ರಾಸ್ ಬಳಿಯ ಶ್ರೀ ಪುಟ್ಟರಾಜ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ನಡೆಯುತ್ತಿರುವ `ರಾಜ್ಯ ಮಟ್ಟದ ಕನ್ನಡ ಸಮೂಹ ಭಜನಾ ಸ್ಪರ್ಧೆ’ಯ ಶ್ರೀ ಗುರುಕುಮಾರ ಸ್ವಾಮಿ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡಿದರು. 

ವೇದಿಕೆಯಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪ್ರಧಾನ ಕಾರ್ಯದರ್ಶಿ ಎ.ಹೆಚ್.ಶಿವಮೂರ್ತಿಸ್ವಾಮಿ, ಸಮಿತಿಯ ಖಜಾಂಚಿ ಜೆ.ಎನ್. ಕರಿಬಸಪ್ಪ ಜಾಲಿಮರದ, ಭಜನಾ ಸಮಿತಿ ಸಂಘಟನಾ ಕಾರ್ಯದರ್ಶಿ ಎ.ಕೊಟ್ರಪ್ಪ ಕಿತ್ತೂರು ಉಪಸ್ಥಿತರಿದ್ದರು. ಸಮಿತಿಯ ಕಾರ್ಯಾಧ್ಯಕ್ಷ ಸಾಲಿಗ್ರಾಮ ಗಣೇಶ್‌ ಶೆಣೈ ಸ್ವಾಗತಿಸಿದರು.

error: Content is protected !!