1 ತಿಂಗಳಲ್ಲಿ ರಸ್ತೆ ಸಂಚಾರಕ್ಕೆ ಮುಕ್ತ: ಪಾಲಿಕೆ ಮೇಯರ್ ವೀರೇಶ್ ಭರವಸೆ
ದಾವಣಗೆರೆ, ಫೆ. 10- ನಗರದ ಮಹಾತ್ಮ ಗಾಂಧಿ ವೃತ್ತದಿಂದ ಅಶೋಕ ಚಿತ್ರಮಂದಿರದ ಕಡೆ ಹೋಗುವ ರಸ್ತೆಯಲ್ಲಿ ಪೈಪ್ ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ.
ಖಾಸಗಿ ಬಸ್ ನಿಲ್ದಾಣದಿಂದ ಮಳೆ ನೀರು ಹರಿಯುವ ಪೈಪ್ ಲೈನ್ ಕಾಮಗಾರಿ ಸದ್ಯ ಈ ರಸ್ತೆಯಲ್ಲಿ ನಡೆಯುತ್ತಿದ್ದು, ನಂತರ ಮಹಾನಗರ ಪಾಲಿಕೆಯಿಂದ ಡ್ರೈನೇಜ್ ಕೆಲಸ ನಡೆಯಲಿದೆ. ಇದಾದ ನಂತರ ಸ್ಮಾರ್ಟ್ ಸಿಟಿ ಯೋಜನೆಯಡಿ ಸಿಮೆಂಟ್ ರಸ್ತೆ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ತಿಳಿಸಿದ್ದಾರೆ.
ಸಿಮೆಂಟ್ ರಸ್ತೆ ನಿರ್ಮಿಸಿ, ಫುಟ್ ಪಾತ್, ಬೀದಿ ದೀಪ ಅಳವಡಿಕೆ ಕಾರ್ಯಗಳು ನಡೆದು ಎರಡು ದಶಕಗಳಿಂದ ಇದ್ದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುತ್ತಿದೆ. ಇಷ್ಟೊತ್ತಿಗೆ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಮುಗಿಯಬೇಕಿತ್ತು. ಆದರೆ ಪವರ್ ಕೇಬಲ್ ಸಮಸ್ಯೆ, ಡ್ರೈನೇಜ್ ವಾಟರ್ ಲೈನ್ ಸಮಸ್ಯೆಗಳು ಎದುರಾಗಿದ್ದರಿಂದ ತಡವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಷ್ಟು ಶೀಘ್ರ ಕಾಮಗಾರಿಗಳನ್ನು ಮುಗಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡಲಾಗುವುದು ಎಂದರು.
ದಾವಣಗೆರೆಯ ಹಳೆಯ ಹಾಗೂ ಹೊಸ ನಗರಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಈ ರಸ್ತೆ ಮುಖ್ಯರಸ್ತೆಯಾಗಿದೆ. ಅಷ್ಟೇ ಅಲ್ಲ, ಮಂಡಿಪೇಟೆ ಸೇರಿದಂತೆ ಮಾರುಕಟ್ಟೆ ಪ್ರದೇಶಗಳಿಗೆ ತೆರಳುವವರು ಈ ಭಾಗದಿಂದಲೇ ಹೆಚ್ಚಾಗಿ ಸಂಚರಿಸುತ್ತಾರೆ. ಅಲ್ಲದೇ ಹಲವಾರು ಚಿತ್ರಮಂದಿರಗಳಿರುವುದರಿಂದಲೂ ಇಲ್ಲಿ ವಾಹನಗಳ ಸಂಚಾರ ಹೆಚ್ಚು.
ಕಳೆದ ಎರಡು ದಶಕಗಳಿಂದ ಈ ರಸ್ತೆ ಗುಂಡಿಗಳ ರಸ್ತೆ ಎಂದೇ ಹೆಸರು ಪಡೆದಿತ್ತು. ಮಳೆ ಬಂದಾಗಂತೂ ವಾಹನ ಸವಾರರಿಗೆ ಸಂಚಾರ ದುಸ್ತರವಾಗಿತ್ತು. ಕೊನೆ ಪಕ್ಷ ಗುಂಡಿಗಳನ್ನಾದರೂ ಮುಚ್ಚಿಸಿ ಎಂಬ ಸಾರ್ವಜನಿಕರ ಕೂಗು ಹೆಚ್ಚಾದ ಹಿನ್ನೆಲೆಯಲ್ಲಿ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಅವರು ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಹಾಗೂ ರೈಲ್ವೇ ಇಲಾಖೆಯ ಎಂಜಿನಿಯರ್ಗಳೊಂದಿಗೆ ಪರಿಶೀಲನೆ ನಡೆಸಿ ಚರ್ಚಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು.
ಸುಮಾರು 18 ಮೀಟರ್ ಅಗಲ, 80 ಮೀಟರ್ ಉದ್ದದ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯಿಂದ ತಾತ್ಕಾಲಿಕವಾಗಿ ರಿಪೇರಿ ಮಾಡಿಸಲಾಗಿತ್ತಾದರೂ. ಕೆಲವೇ ದಿನಗಳಲ್ಲಿ ರಸ್ತೆ ತನ್ನ ಮೊದಲ ಸ್ವರೂಪಕ್ಕೆ ಬದಲಾಗಿತ್ತು.
ಒಂದು ಕಡೆ ರೈಲ್ವೇ ಗೇಟ್ ಸಮಸ್ಯೆ ಮತ್ತೊಂದು ಕಡೆ ರಸ್ತೆಯಲ್ಲಿನ ಗುಂಡಿಗಳ ಸಮಸ್ಯೆ ಎದುರಿಸುತ್ತಿದ್ದ ವಾಹನ ಸವಾರರು ಈ ಸಮಸ್ಯೆಗೆ ಮುಕ್ತಿಯೇ ಇಲ್ಲವೇ? ಎಂದು ಪ್ರಶ್ನಿಸುತ್ತಿದ್ದರು. ನಗರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದ್ದು, ಸಾವಿರಾರು ಕೋಟಿ ರೂ. ಅನುದಾನ ಇದ್ದರೂ ಇದೊಂದು ತುಂಡು ರಸ್ತೆಗೆ ಮಾತ್ರ ದುರಸ್ತಿ ಭಾಗ್ಯ ಕೂಡಿರಲಿಲ್ಲ. ಆದರೆ ಇದೀಗ ಪಾಲಿಕೆಯಿಂದ ದುರಸ್ತಿ ಕಾಮಗಾರಿ ನಡೆಯುತ್ತಿರುವುದು ಸಂತಸದ ವಿಚಾರ. ಆದರೆ ಆದಷ್ಟು ಶೀಘ್ರ ಕಾಮಗಾರಿ ಮುಗಿಸಿ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಡಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.