ಮಲೇಬೆನ್ನೂರು, ಫೆ. 9- ಎಸ್ಟಿ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಶೇ.3 ರಿಂದ ಶೇ.7.5 ಕ್ಕೆ ಹೆಚ್ಚಳ ಮಾಡುವಂತೆ ಒತ್ತಾಯಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಪ್ರಕಟಿಸಿದರು.
ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಇಂದು ಹಮ್ಮಿಕೊಂಡಿದ್ದ ಶ್ರೀಮಠದ 24 ನೇ ವಾರ್ಷಿಕೋತ್ಸವ ಮತ್ತು ವಾಲ್ಮೀಕಿ ರಥೋತ್ಸವದ ಅಂಗವಾಗಿ ಲಿಂಗೈಕ್ಯ ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿಯವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ನಡೆದ ರಾಜ್ಯಮಟ್ಟದ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ, ಮಾತನಾಡಿದರು.
ಗುರುವಾರ ಬೆಳಿಗ್ಗೆ 10 ಗಂಟೆಗೆ ವಾಲ್ಮೀಕಿ ಪುತ್ಥಳಿ ಮತ್ತು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಫ್ರೀಡಂ ಪಾರ್ಕ್‌ನಲ್ಲಿ ಏಕಾಂಗಿಯಾಗಿ ಧರಣಿ ಸತ್ಯಾಗ್ರಹ ಪ್ರಾರಂಭಿಸುತ್ತೇನೆ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಭಕ್ತರು ಅಲ್ಲಿಗೆ ಬರುವುದು ಬೇಡ. ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸಬೇಕೆಂದಾಗ ಸಭೆಯಲ್ಲಿದ್ದ ಭಕ್ತರು ನಾವು ನಿಮ್ಮ ಜೊತೆ ಧರಣಿ ಕುಳಿತುಕೊಳ್ಳುವುದಾಗಿ ವೇದಿಕೆ ಬಳಿ ಜಮಾಯಿಸಿ ಘೋಷಣೆ ಕೂಗಿದರು. ಆಗ ಭಾವುಕರಾದ ಶ್ರೀಗಳು, ನಿಮ್ಮ ಅಭಿಮಾನ ನಮಗೆ ಅರ್ಥವಾಗುತ್ತದೆ. ನಮಗೆ ಭಕ್ತರ ಆರೋಗ್ಯ ಮುಖ್ಯವಾಗಿರುವುದರಿಂದ ಹೆಚ್ಚು ಜನ ಅಲ್ಲಿ ಸೇರುವುದು ಸೂಕ್ತವಲ್ಲ ಎಂದು ಮನವರಿಕೆ ಮಾಡಿಕೊಟ್ಟರು.
ಮೀಸಲಾತಿ ಹೆಚ್ಚಳದ ಜೊತೆಗೆ ನಕಲಿ ಜಾತಿ ಪ್ರಮಾಣ ಪತ್ರ ತಡೆಗೆ ಕಾನೂನು ಕ್ರಮ ಕೈಗೊಳ್ಳಬೇಕು. ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಕೂಡಲೇ ಗಮನ ಹರಿಸಬೇಕು. ಎಸ್ಸಿ, ಎಸ್ಟಿ ನೌಕರರಿಗೆ ಜೇಷ್ಠತೆ ಆಧಾರಿತ ಹುದ್ದೆ ನೀಡಬೇಕು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಜೊತೆಗೆ ವಾಲ್ಮೀಕಿ ಮಂದಿರವನ್ನು ನಿರ್ಮಿಸಬೇಕು.
ರಾಜ್ಯದಲ್ಲಿ ವಾಲ್ಮೀಕಿ ಅಧ್ಯಯನ ಪೀಠಗಳಿಗೆ ಮೂಲಭೂತ ಸೌಕರ್ಯ ನೀಡಬೇಕು. ಎಸ್ಟಿ ಸಚಿವಾಲಯದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಚೇರಿಗಳನ್ನು ತೆರೆಯಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಮಿತ್ ಷಾ ಅವರು ಕೊಟ್ಟ ಮಾತಿನಂತೆ ಚಿತ್ರದುರ್ಗದಲ್ಲಿ ಮದಕರಿ ನಾಯಕರ ಥೀಮ್ ಪಾರ್ಕ್ ನಿರ್ಮಿಸಬೇಕು. ಬೆಂಗಳೂರಿನಲ್ಲಿ ಮೆಟ್ರೋ ರೈಲು ನಿಲ್ದಾಣಕ್ಕೆ ವಾಲ್ಮೀಕಿ ಅವರ ಹೆಸರನ್ನು ನಾಮಕರಣ ಮಾಡಬೇಕೆಂಬ ಬೇಡಿಕೆಗಳನ್ನು ಸರ್ಕಾರ ಪರಿಗಣಿಸಬೇಕೆಂದು ಸ್ವಾಮೀಜಿ ಆಗ್ರಹಿಸಿದರು.
ಶ್ರೀಗಳ ಮನವಿ : ವಾಲ್ಮೀಕಿ ಜಾತ್ರೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಿದ್ದು, 3 ಜಾತ್ರೆಗಳಿಗೆ ಭಕ್ತರು ಹಾಗೂ ಸರ್ಕಾರ ಮಾಡಿದ ನೆರವಿನಲ್ಲಿ ಖರ್ಚಾಗಿ ಉಳಿದ 4.16 ಕೋಟಿ ರೂ.ಗಳನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಿದ್ದೇವೆ. ಮಠ ಹಾಗೂ ನಮ್ಮ ಬಗ್ಗೆ ಯಾರೂ ಬಹಿರಂಗ ಚರ್ಚೆ ಮಾಡಬೇಡಿ. ಏನೇ ಸಂದೇಹಗಳಿದ್ದರೂ ನಮ್ಮನ್ನು ಕೇಳಿ ಬಗೆಹರಿಸಿಕೊಳ್ಳಿ ಎಂದು ಶ್ರೀಗಳು ಮನವಿ ಮಾಡಿದರು.
4 ನೇ ವರ್ಷದ ವಾಲ್ಮೀಕಿ ಜಾತ್ರಾ ಸಮಿತಿಯ ಅಧ್ಯಕ್ಷರೂ ಆದ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಕೋವಿಡ್ ಕಾರಣದಿಂದಾಗಿ ಮುಂದೂಡಿರುವ 4 ನೇ ವರ್ಷದ ವಾಲ್ಮೀಕಿ ಜಾತ್ರೆಯನ್ನು ಶ್ರೀ ಪುಣ್ಯಾನಂದ ಪುರಿ ಸ್ವಾಮೀಜಿ ಲಿಂಗೈಕ್ಯರಾದ ಏಪ್ರಿಲ್ 3 ರಂದೇ ಆಚರಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಮೀಸಲಾತಿ ಹೆಸರಿನಲ್ಲಿ ಮೂರು ಬಾರಿ ಶಾಸಕನಾಗಿದ್ದೇನೆ. ಮೀಸಲಾತಿ ವಿಚಾರ ಬಂದಾಗ ಎಲ್ಲಾ ತ್ಯಾಗ ಸಿದ್ದನಿದ್ದೇನೆ ಎಂದರು.
ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್, ಕೆಪಿಎಸ್‌ಸಿ ನಿವೃತ್ತ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ, ಮಠದ ಧರ್ಮದರ್ಶಿ ಶ್ರೀಮತಿ ಶಾಂತಲಾ ರಾಜಣ್ಣ ಮಾತನಾಡಿದರು.
ಹೊದಿಗೆರೆ ರಮೇಶ್ ಮಾತನಾಡಿ, ಸಚಿವ ಶ್ರೀರಾಮುಲು ಅವರು ಮೀಸಲಾತಿ ಹೆಚ್ಚಳ ಮಾಡದ ಆ ಸರ್ಕಾರದಲ್ಲಿ ಮುಂದುವರೆಯಬಾರದು. ರಾಜೀನಾಮೆ ಕೊಟ್ಟು ಶ್ರೀಗಳ ಜೊತೆ ಬನ್ನಿ, ಸಮಾಜ ನಿಮಗೆ ಸೂಕ್ತ ಸ್ಥಾನಮಾನ ನೀಡುತ್ತದೆ ಎಂದರು.
ಹೋರಾಟಗಾರರಾದ ಸಿರಿಗೆರೆ ತಿಪ್ಪೇಶ್, ಬಸವರಾಜ ನಾಯಕ, ಹರ್ತಿಕೋಟೆ ವೀರೇಂದ್ರಸಿಂಹ, ಟಿ. ಈಶ್ವರ್, ಚಾಮರಾಜನಗರ ಜಿಲ್ಲೆಯ ಶ್ರೀನಿವಾಸ ನಾಯಕ, ಅಣಜಿ ಅಂಜಿನಪ್ಪ, ವೈ. ಹನುಮಂತನಾಯಕ, ಶ್ರೀಮತಿ ವಿಜಯಶ್ರೀ, ಮಹೇಂದ್ರ ಕುಸಗಲ್, ಎಲ್. ಮುನಿಸ್ವಾಮಿ, ಕೋಲಾರದ ವೆಂಕಟರಮಣ, ತುಳಸಿರಾಮ್, ಹಾವೇರಿಯ ಚಂದ್ರು ಮಾತನಾಡಿದರು.
ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಧರ್ಮದರ್ಶಿಗಳಾದ ಬಿ. ವೀರಣ್ಣ, ಕೆ.ಬಿ. ಮಂಜುನಾಥ, ಹೊಸಪೇಟೆಯ ಜಂಬಣ್ಣ ನಾಯಕ, ಶಿವಮೊಗ್ಗದ ಬಸವರಾಜಪ್ಪ, ಹಾಸನದ ಮಹೇಶ್, ಕೊಪ್ಪಳದ ರತ್ನಾಕರ, ಧಾರವಾಡದ ಭರತ್, ಜಿಗಳಿ ಆನಂದಪ್ಪ, ಹರಿಹರದ ಪಾರ್ವತಿ, ಹರಪನಹಳ್ಳಿಯ ಉಚ್ಚೆಂಗಪ್ಪ, ಫಣಿಯಾಪುರದ ಲಿಂಗರಾಜ್, ಪತ್ರಕರ್ತ ಜಿಗಳಿ ಪ್ರಕಾಶ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.