ಮಲೇಬೆನ್ನೂರಿನಲ್ಲೂ ಸದ್ದು ಮಾಡಿದ ಹಿಜಾಬ್‌ ಯುವಕನಿಗೆ ತಿವಿತ : ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ

ಮಲೇಬೆನ್ನೂರು, ಫೆ.9- ಹಿಜಾಬ್‌ ವಿವಾದ ಮಲೇಬೆನ್ನೂರು ಪಟ್ಟಣದಲ್ಲೂ ಸದ್ದು ಮಾಡಿದ್ದು, ಹಿಜಾಬ್‌ ಕುರಿತು ಜಾಲತಾಣದಲ್ಲಿ ಪ್ರಚೋದನಕಾರಿ ಚಿತ್ರ ಹಾಕಿದ ಯುವಕನಿಗೆ ಇನ್ನೊಂದು ಗುಂಪಿನ ಯುವಕರು ಸ್ಕ್ರೂ ಡ್ರೈವರ್‌ನಿಂದ ಹೊಟ್ಟೆಗೆ ತಿವಿದ ಘಟನೆ ಬುಧವಾರ ಮಧ್ಯಾಹ್ನ ಜಿಗಳಿ ಸರ್ಕಲ್‌ನಲ್ಲಿ ನಡೆದಿದೆ. 

ಈ ಘಟನೆಯಿಂದಾಗಿ ಪಟ್ಟಣದಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿದ್ದು, ಎಲ್ಲೆಡೆ ಮುಂಜಾಗ್ರತೆ ಕ್ರಮವಾಗಿ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಅಲ್ಲದೆ ಪಟ್ಟಣದಲ್ಲಿ ನಾಳೆ ದಿನಾಂಕ 11 ರ ತಡರಾತ್ರಿವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಸ್ಕ್ರೂ ಡ್ರೈವರ್‌ ತಿವಿತದಿಂದಾಗಿ ಯುವಕನ ಪಕ್ಕೆ ಭಾಗದಲ್ಲಿ ಗಾಯವಾಗಿ ತೀವ್ರ ರಕ್ತ ಬಂದಿದ್ದು, ತಕ್ಷಣ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಸಿ.ಜಿ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗಾಯಗೊಂಡಿದ್ದ ಯುವಕ ಚಿಕಿತ್ಸೆ ನಂತರ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ನಾಲ್ವರು ಯುವಕರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ಘಟನೆ ನಡೆದ ಜಿಗಳಿ ಸರ್ಕಲ್‌ನಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ. ಉಳಿದ ಭಾಗಗಳಲ್ಲಿ ವಿಷಯ ತಿಳಿಯುತ್ತಿದ್ದಂತೆಯೇ ಕೆಲವರು ಭಯದಿಂದ ಅಂಗಡಿಗಳನ್ನು ಬಂದ್‌ ಮಾಡಿದರು.

ಗಾಯಗೊಂಡಿದ್ದ ಯುವಕನನ್ನು ಆರೋಗ್ಯ ಕೇಂದ್ರಕ್ಕೆ ಕರೆ ತಂದಾಗ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರನ್ನು ಸಿಪಿಐ ಸತೀಶ್‌ಕುಮಾರ್‌, ಪಿಎಸ್‌ಐಗಳಾದ ರವಿಕುಮಾರ್‌, ವೀರಬಸಪ್ಪ ಕುಸಲಾಪುರ ಅವರ ನೇತೃತ್ವದಲ್ಲಿ ಪೊಲೀಸರು ತೆರವುಗೊಳಿಸಿ ವಾತಾವರಣವನ್ನು ತಿಳಿಗೊಳಿಸಿದರು. ವಿಷಯ ತಿಳಿದ ತಕ್ಷಣ ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಗುರುವಾರ ಪಟ್ಟಣದಲ್ಲಿ ನಡೆಯಬೇಕಾಗಿದ್ದ ವಾರದ ಸಂತೆಯನ್ನು ರದ್ದು ಮಾಡುವಂತೆ ಪುರಸಭೆ ಮುಖ್ಯಾಧಿಕಾರಿ ರುಕ್ಮಿಣಿ ಅವರಿಗೆ ತಹಶೀಲ್ದಾರ್‌ ಅವರು ಸೂಚಿಸಿದ ನಂತರ ಧ್ವನಿವರ್ಧಕದ ಮೂಲಕ ಸಂತೆ ರದ್ದು ಮಾಡಿರುವ ಬಗ್ಗೆ ಪ್ರಚಾರ ಮಾಡಲಾಯಿತು.

ಉಪತಹಶೀಲ್ದಾರ್‌ ಆರ್‌. ರವಿ, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್‌ ಈ ವೇಳೆ ಹಾಜರಿದ್ದರು.

ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪಟ್ಟಣದಲ್ಲಿ ಇಬ್ಬರು ಸಿಪಿಐ, ನಾಲ್ವರು ಪಿಎಸ್‌ಐಗಳು ಮತ್ತು ಕೆಎಸ್‌ಆರ್‌ಪಿ ಹಾಗೂ ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಪಿಎಸ್‌ಐ ರವಿಕುಮಾರ್‌ ತಿಳಿಸಿದ್ದಾರೆ.

ಎಚ್ಚರಿಕೆ : ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸಂದೇಶಗಳು ಹಾಗೂ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಪಿಎಸ್‌ಐ ರವಿಕುಮಾರ್ ಎಚ್ಚರಿಕೆ ನೀಡಿದ್ದಾರೆ.

error: Content is protected !!