ರಾಜ್ಯಮಟ್ಟದ ಕನ್ನಡ ಸಮೂಹ ಭಜನಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಅಥಣಿ ಎಸ್. ವೀರಣ್ಣ
ದಾವಣಗೆರೆ, ಫೆ. 9- ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ನಮ್ಮ ನಾಡು, ನುಡಿಯ ಭಕ್ತಿ ಪ್ರಧಾನವಾದ ಸಂಸ್ಕೃತಿ ಮರೆಯಾಗುತ್ತಿರುವುದು ವಿಷಾದದ ಸಂಗತಿ ಎಂದು ಲೆಕ್ಕ ಪರಿಶೋಧಕರಾದ ಅಥಣಿ ಎಸ್. ವೀರಣ್ಣ ತಿಳಿಸಿದರು.
ನಗರದ ಹೊರ ವಲಯದಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ಮೊನ್ನೆ ಉದ್ಘಾಟನೆಯಾದ `ರಾಜ್ಯಮಟ್ಟದ ಕನ್ನಡ ಸಮೂಹ ಭಜನಾ ಸ್ಪರ್ಧೆ’ 3ನೇ ದಿನದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.
ಪ್ರಸ್ತುತ ದಿನಮಾನಗಳಲ್ಲಿ ಯುವ ಪೀಳಿಗೆ ಮಕ್ಕಳು, ವಿದೇಶಿ ಉಡುಗೆ-ತೊಡುಗೆಯೊಂದಿಗೆ ಟಿ.ವಿ.ಮಾಧ್ಯಮ ಗಳಲ್ಲಿ ನೃತ್ಯ, ಪಾಶ್ಚಾತ್ಯ ಸಂಗೀತ ಕಾರ್ಯಕ್ರಮಗಳಲ್ಲಿ ಮುಳುಗಿರುವುದು ನಮ್ಮ ಸಂಸ್ಕಾರ, ಸಂಸ್ಕೃತಿಗಳಿಗೆ ಧಕ್ಕೆ ತರುವ ವಾತಾವರಣ ಸೃಷ್ಟಿಯಾಗುತ್ತಿದೆ. ಅದನ್ನು ಹೊರತುಪಡಿಸಿ ನಮ್ಮ ನಾಡಿನ ಆರಾಧನಾ ಕಲೆಗಳನ್ನು ಭಕ್ತಿ, ಭಾವದ ಶಾಸ್ತ್ರೀಯ ಸಂಗೀತದ ಕಡೆಗೆ ಹೊಸ ಪೀಳಿಗೆಗಳಿಗೆ ಮನದಟ್ಟು ಮಾಡುವುದು ಅಭಿಮಾನ ಮೂಡಿಸುವುದು ಕೆಲವು ಸಂಘಟನೆಗಳ ಆದ್ಯ ಕರ್ತವ್ಯವಾಗಿದೆ. ಈ ಹಂತದಲ್ಲಿ ಶ್ರೀ ವೀರೇಶ್ವರ ಪುಣ್ಯಾಶ್ರಮದ ಆಶ್ರಯದಲ್ಲಿ ನಿರಂತರವಾಗಿ ಒಂದು ತಿಂಗಳ ಕಾಲ ರಾಜ್ಯ ಮಟ್ಟದ ಕನ್ನಡ ಸಮೂಹ ಭಜನಾ ಸ್ಪರ್ಧೆ ಏರ್ಪಡಿಸಿ ನಮ್ಮ ಭಜನಾ ಪರಂಪರೆಯನ್ನು ವೈಭವೀಕರಿಸುವ ಸತ್ಕಾರ್ಯ ನಿಜಕ್ಕೂ ದಾವಣಗೆರೆ ನಗರಕ್ಕೆ ಕಳಸ ಪ್ರಾಯವಾಗಿದೆ ಎಂದು ವೀರಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ವೀರೇಶ್ವರ ಪುಣ್ಯಾಶ್ರಮದ ಪ್ರಧಾನ ಕಾರ್ಯ ದರ್ಶಿ ಎ.ಹೆಚ್. ಶಿವಮೂರ್ತಿಸ್ವಾಮಿ, ಸಮಿತಿ ಸದಸ್ಯ ರಾದ ಎ.ಹೆಚ್. ಲಕ್ಷ್ಮೀಛಾಯಾ, ಖಜಾಂಚಿ ಜಿ.ಎನ್. ಕರಿಬಸಪ್ಪ ಜಾಲಿಮರದ, ಸಂಘಟನಾ ಕಾರ್ಯದರ್ಶಿ ಎ.ಕೊಟ್ರಪ್ಪ ಕಿತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಕಾರ್ಯಾಧ್ಯಕ್ಷ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾರಂಭದಲ್ಲಿ ಸ್ವಾಗತಿಸಿದರು.